ಬೆಂಗಳೂರು: ದೊಡ್ಡಬಳ್ಳಾಪುರದ ಬಳಿ 25 ಸಾವಿರ ಕೋಟಿ ರೂ. ಹೂಡಿಕೆ ಮೂಲಕ ತನ್ನ ಬೃಹತ್ ಉತ್ಪಾದನಾ ಘಟಕ ಸ್ಥಾಪಿಸುತ್ತಿರುವ ತೈವಾನ್ ಮೂಲದ ಫಾಕ್ಸ್ ಕಾನ್ ಕಂಪನಿಗೆ ಅಗತ್ಯ ಮೂಲಸೌಲಭ್ಯಗಳ ಜೊತೆಗೆ ಎಲ್ಲ ನೆರವನ್ನೂ ಕೊಡಲಾಗುವುದು. ಇದಲ್ಲದೆ, ರಾಜ್ಯದಲ್ಲಿ ಇನ್ನೂ ಹೆಚ್ವು ಹೆಚ್ಚು ಹೂಡಿಕೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಫಾಕ್ಸ್ ಕಾನ್ ಕಂಪನಿಯ ಸಿಇಒ ಮತ್ತು ಅಧ್ಯಕ್ಷ ಯಂಗ್ ಲಿಯು ನೇತೃತ್ವದ ಉನ್ನತ ಮಟ್ಟದ ನಿಯೋಗಕ್ಕೆ ಶುಕ್ರವಾರ ರಾತ್ರಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಸಿಎಂ ಮಾತನಾಡಿದರು. ಫಾಕ್ಸ್ ಕಾನ್ ಕಂಪನಿಗೆ ರಾಜ್ಯ ಸರ್ಕಾರದ ವತಿಯಿಂದ ಸಂಪೂರ್ಣ ಸಹಕಾರ ಕೊಡಲಾಗುವುದು. ನೀರು, ವಿದ್ಯುತ್, ರಸ್ತೆ, ಕಾನೂನು ಮತ್ತು ಇತ್ಯಾದಿಗಳನ್ನೆಲ್ಲ ನಾವು ಒದಗಿಸಲಿದ್ದೇವೆ. ಕಂಪನಿಯು ಫ್ಯಾಬ್ ಉದ್ಯಮ ವಲಯ ಸೇರಿದಂತೆ ಮಿಕ್ಕ ವಲಯಗಳಲ್ಲೂ ಹೆಚ್ಚು ಹೂಡಿಕೆ ಮಾಡಲು ಒಲವು ತೋರಿಸಬೇಕು. ರಾಜ್ಯವು ಅತ್ಯುತ್ತಮ ಮೌಲ್ಯಗಳಿಂದ ಕೂಡಿರುವ ಕೈಗಾರಿಕಾ ಸಂಸ್ಕೃತಿಯನ್ನು ಹೊಂದಿದೆ. ರಾಜ್ಯವು ಸಮಗ್ರ ಕೈಗಾರಿಕಾ ಅಭಿವೃದ್ಧಿಗೆ ಒತ್ತು ಕೊಟ್ಟಿದೆ ಎಂದು ಆಶ್ವಾಸನೆ ನೀಡಿದರು.
ಇದಕ್ಕೆ ಸ್ಪಂದಿಸಿದ ಯಂಗ್ ಲಿಯು, 'ರಾಜ್ಯದಲ್ಲಿ ಸದ್ಯದಲ್ಲೇ ಕಾರ್ಯಾಚರಣೆ ಆರಂಭಿಸಲಿರುವ ಘಟಕವು ಚೀನಾದ ನಂತರದ ಎರಡನೇ ಅತ್ಯಂತ ಬೃಹತ್ ಘಟಕವಾಗಿದೆ. ಇಲ್ಲಿ 40,000 ಮಧ್ಯಮ ಸ್ತರದ ವಿದ್ಯಾವಂತರಿಗೆ ಉದ್ಯೋಗಾವಕಾಶ ಸಿಗಲಿದೆ. ಇವರನ್ನು ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ. ಜೊತೆಗೆ, ನಮ್ಮ ಹೂಡಿಕೆ ಇಷ್ಟಕ್ಕೇ ನಿಲ್ಲುವುದಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ಪರಸ್ಪರ ವಿಶ್ವಾಸವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು' ಎಂದು ಹೇಳಿದರು.
'ಉದ್ಯೋಗಿಗಳಿಗೆ ಮನೆಗಿಂತಲೂ ಹೆಚ್ಚಿನ ನೆಮ್ಮದಿಯ ವಾತಾವರಣ ಇರಲಿದೆ. ಇವರಿಗೆ ಗುಣಮಟ್ಟದ ಮನೋರಂಜನೆ, ಜಿಮ್, ವಸತಿ ಸೌಲಭ್ಯ, ಆಹಾರ ಎಲ್ಲವನ್ನೂ ಫಾಕ್ಸ್ ಕಾನ್ ಕಂಪನಿ ಒದಗಿಸಲಿದೆ. ಈ ಮೂಲಕ ಜಾಗತಿಕ ಗುಣಮಟ್ಟದ ಕೈಗಾರಿಕಾ ಪರಿಸರ ನಿರ್ಮಿಸಲಾಗುವುದು' ಎಂದು ನುಡಿದರು.