ನವದೆಹಲಿ : ಪ್ರಸಕ್ತ ರಬಿ ಮಾರುಕಟ್ಟೆ ಋತುವಿನಲ್ಲಿ ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಲ್ಲಿ ಈಗಾಗಲೇ 262.40 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿಸಿ ದಾಸ್ತಾನು ಮಾಡಿದೆ. ಇದು ಕಳೆದ ವರ್ಷದ ಒಟ್ಟು 262.02 ಲಕ್ಷ ಮೆಟ್ರಿಕ್ ಟನ್ ಖರೀದಿ ಮೀರಿಸಿದೆ ಎಂದು ಆಹಾರ ಸಚಿವಾಲಯ ಶುಕ್ರವಾರ ತಿಳಿಸಿದೆ. 2024-25 ರ ಹಿಂಗಾರು ಮಾರುಕಟ್ಟೆ ಋತುವಿನಲ್ಲಿ ಒಟ್ಟು 22.31 ಲಕ್ಷ ರೈತರು ಎಂಎಸ್ಪಿ ಅಡಿ ಒಟ್ಟಾರೆ 59,715 ಕೋಟಿ ರೂ. ಲಾಭ ಪಡೆದಿದ್ದಾರೆ.
ಮುಖ್ಯವಾಗಿ 5 ರಾಜ್ಯಗಳಿಂದ ಗೋಧಿ ಖರೀದಿ ಮಾಡಲಾಗಿದೆ. ಪಂಜಾಬ್ 124.26 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ದಾಸ್ತಾನಿನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಹರಿಯಾಣ 71.49 ಎಲ್ಎಂಟಿ ಮತ್ತು ಮಧ್ಯಪ್ರದೇಶ 47.78 ಎಲ್ಎಂಟಿ ದಾಸ್ತಾನಿನೊಂದಿಗೆ ಮೂರನೇ ಸ್ಥಾನದಲ್ಲಿವೆ. ರಾಜಸ್ಥಾನ ಮತ್ತು ಉತ್ತರ ಪ್ರದೇಶ ಕ್ರಮವಾಗಿ 9.66 ಎಲ್ ಎಂಟಿ ಮತ್ತು 9.07 ಎಲ್ ಎಂಟಿಯೊಂದಿಗೆ ನಂತರದ ಸ್ಥಾನದಲ್ಲಿವೆ.
ಗೋಧಿ ಖರೀದಿ ಮತ್ತು ದಾಸ್ತಾನು ಸಾಮಾನ್ಯವಾಗಿ ಏಪ್ರಿಲ್ನಿಂದ ಮಾರ್ಚ್ ವರೆಗೆ ನಡೆಯುತ್ತದೆ. ಆದರೆ, ಈ ವರ್ಷ ಕೇಂದ್ರವು ಬೆಳೆ ಆಗಮನದ ಆಧಾರದ ಮೇಲೆ ಖರೀದಿ ಮಾಡಲು ರಾಜ್ಯಗಳಿಗೆ ಅವಕಾಶ ನೀಡಿದೆ. ಹೀಗಾಗಿ ಹೆಚ್ಚಿನ ರಾಜ್ಯಗಳಲ್ಲಿ, ಖರೀದಿಯು ಮಾರ್ಚ್ ಆರಂಭದಲ್ಲಿಯೇ ಪ್ರಾರಂಭವಾಗಿದೆ. 2024-25ರ ಮಾರುಕಟ್ಟೆ ವರ್ಷದಲ್ಲಿ 300 ರಿಂದ 320 ಮಿಲಿಯನ್ ಟನ್ ಗೋಧಿ ಖರೀದಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.