ನವದೆಹಲಿ:ಮೊಬೈಲ್ ಫೋನ್, ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಅಸೆಂಬ್ಲಿ (ಪಿಸಿಬಿಎ) ಮತ್ತು ಮೊಬೈಲ್ ಚಾರ್ಜರ್‌ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು (ಬಿಸಿಡಿ) ಪ್ರಸ್ತುತ ಇರುವ ಶೇ.20 ರಿಂದ ಶೇ.15ಕ್ಕೆ ಇಳಿಸುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿದೆ. ಕಳೆದ ಆರು ವರ್ಷಗಳಲ್ಲಿ ದೇಶೀಯ ಉತ್ಪಾದನೆಯಲ್ಲಿ ಮೂರು ಪಟ್ಟು ಹೆಚ್ಚಳ ಮತ್ತು ಮೊಬೈಲ್ ಫೋನ್‌ಗಳ ರಫ್ತಿನಲ್ಲಿ ಸುಮಾರು 100 ಪಟ್ಟು ಹೆಚ್ಚಳದೊಂದಿಗೆ, ಭಾರತೀಯ ಮೊಬೈಲ್ ಫೋನ್ ಉದ್ಯಮವು ಗಮರ್ನಾಹವಾಗಿ ಬೆಳೆದಿದೆ.
"ಗ್ರಾಹಕರ ಹಿತದೃಷ್ಟಿಯಿಂದ, ನಾನು ಈಗ ಮೊಬೈಲ್ ಫೋನ್‌ಗಳು, ಮೊಬೈಲ್ ಪಿಸಿಬಿಎ ಮತ್ತು ಮೊಬೈಲ್ ಚಾರ್ಜರ್‌ಗಳ ಮೇಲಿನ ಬಿಸಿಡಿಯನ್ನು ಶೇ.15ಕ್ಕೆ ಇಳಿಸಲು ನಿರ್ಧರಿಸಲಾಗಿದೆ" ಎಂದು ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ನಲ್ಲಿ ಪ್ರಕಟಿಸಿದ್ದಾರೆ.
ಭಾರತದ ಎಲೆಕ್ಟ್ರಾನಿಕ್ಸ್ ಕ್ಷೇತ್ರವು ತ್ವರಿತ ಬೆಳವಣಿಗೆಯನ್ನು ಕಂಡಿದೆ, 2023ರ ಹಣಕಾಸು ವರ್ಷದಲ್ಲಿ ಇದು 155 ಬಿಲಿಯನ್ ಡಾಲರ್ ತಲುಪಿದೆ. ಉತ್ಪಾದನೆಯು 2017ರ ಹಣಕಾಸು ವರ್ಷದಲ್ಲಿ 48 ಬಿಲಿಯನ್ ಡಾಲರ್ ನಿಂದ 2023ರ ಹಣಕಾಸು ವರ್ಷದಲ್ಲಿ 101 ಬಿಲಿಯನ್ ಡಾಲರ್ಗೆ ದ್ವಿಗುಣಗೊಂಡಿದೆ. ಇದರಲ್ಲಿ ಮೊಬೈಲ್ ಫೋನ್‌ಗಳು ಹೆಚ್ಚಿನ ಪಾಲು ಹೊಂದಿದೆ. ಇದು ಈಗ ಒಟ್ಟು ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಶೇ.43 ರಷ್ಟಿದೆ.
ಕೇಂದ್ರ ಬಿಸಿಡಿ ಇಳಿಕೆ ಮಾಡಿದ್ದೇಕೆ?:ಇಂಡಿಯಾ ಸೆಲ್ಯುಲರ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ICEA) ಅಧ್ಯಕ್ಷ ಪಂಕಜ್ ಮೊಹಿಂದ್ರೂ ಅವರು, ಈ ಮಹತ್ವದ ಬಜೆಟ್‌ಗಾಗಿ ಕೇಂದ್ರ ಸರ್ಕಾರವನ್ನು ಅಭಿನಂದಿಸಿದ್ದಾರೆ. "ಉತ್ಪಾದನೆ ಮತ್ತು ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವತ್ತ ಗಮನ ಹರಿಸಿರುವ ಬಜೆಟ್ ಉದ್ದೇಶ ಮತ್ತು ನಿರ್ಧಾರದಿಂದ ನಾವು ಪ್ರಭಾವಿತರಾಗಿದ್ದೇವೆ. ಮೊಬೈಲ್ ಫೋನ್ ಉತ್ಪಾದನೆ ಮತ್ತು ರಫ್ತಿನ ಬೆಳವಣಿಗೆಯನ್ನು ಹಣಕಾಸು ಸಚಿವರು ಒಪ್ಪಿಕೊಂಡಿದ್ದಾರೆ" ಎಂದು ಮೊಹಿಂದ್ರೂ ತಿಳಿಸಿದ್ದಾರೆ.