ಇಂದಿನ ಆಧುನಿಕ ಯುಗದಲ್ಲಿ ಬೈಕ್ ಪ್ರಯಾಣ ಅತ್ಯಗತ್ಯವಾಗಿದೆ. ಬಹುತೇಕ ಎಲ್ಲರ ಮನೆಯಲ್ಲೂ ದ್ವಿಚಕ್ರ ವಾಹನ ಇದ್ದೇ ಇರುತ್ತದೆ. ಅದರಲ್ಲೂ ಯುವಕರು ಕಚೇರಿ, ಕಾಲೇಜಿಗೆ ಅಥವಾ ಬೇರೆಡೆ ಹೋಗಲು ಹೆಚ್ಚಾಗಿ ಬೈಕ್‌ಗಳನ್ನೇ ಬಳಸುತ್ತಾರೆ. ಆದರೆ, ಅನೇಕರು ಬೈಕ್ ಓಡಿಸುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಮೈಲೇಜ್ ಕಡಿಮೆಯಾಗುತ್ತದೆ.
ಆದ್ದರಿಂದಲೇ ಹೆಚ್ಚಿನವರು ತಮ್ಮ ದ್ವಿಚಕ್ರ ವಾಹನವು ಕಂಪನಿ ಹೇಳುವ ಮೈಲೇಜ್ ನೀಡುವುದಿಲ್ಲ ಹಾಗೂ ಲೀಟರ್ ಪೆಟ್ರೋಲ್‌ಗೆ ಕನಿಷ್ಠ 40 ಕಿಲೋಮೀಟರ್ ಮೈಲೇಜ್ ಕೂಡ ಕೊಡುವುದಿಲ್ಲ ಎಂದು ದೂರುತ್ತಾರೆ. ನಿಮ್ಮ ಬೈಕ್ ಕೂಡ ಕಡಿಮೆ ಮೈಲೇಜ್ ನೀಡುತ್ತಿದೆಯೇ? ಹಾಗಾದರೆ, ಈ ಸಲಹೆಗಳನ್ನು ಪಾಲಿಸಿದರೆ ಮೈಲೇಜ್ ಹೆಚ್ಚಾಗುವುದಲ್ಲದೇ ಇಂಧನಕ್ಕೆ ತಗಲುವ ವೆಚ್ಚ ಕೂಡ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು.
ಗೇರ್ ಶಿಫ್ಟಿಂಗ್: ಬೈಕ್‌ನ ಮೈಲೇಜ್ ಕಡಿಮೆಯಾಗಲು ಸರಿಯಾದ ಸಮಯಕ್ಕೆ ಗೇರ್ ಬದಲಾಯಿಸದೇ ಇರುವುದೂ ಒಂದು ಕಾರಣ. ಆದ್ದರಿಂದ, ಮೈಲೇಜ್ ನಷ್ಟ ತಪ್ಪಿಸಲು ಈ ಅಂಶವನ್ನು ಪಾಲನೆ ಮಾಡಬೇಕಾಗುತ್ತದೆ. ಅಲ್ಲದೆ, ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುವಾಗ ಕಡಿಮೆ ಗೇರ್ ಅನ್ನು ಬಳಸುವುದು ಎಂಜಿನ್ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವುದಲ್ಲದೇ, ಹೆಚ್ಚಿನ ಇಂಧನ ಬಳಕೆಗೆ ಕಾರಣವಾಗುತ್ತದೆ.
ಆದ್ದರಿಂದ, ನೀವು ಅತ್ಯುತ್ತಮ ಮೈಲೇಜ್ ಪಡೆಯಲು ಬಯಸಿದರೆ, ವೇಗ ಮತ್ತು ರಸ್ತೆ ಪರಿಸ್ಥಿತಿಗಳಿಗೆ ಅನುಗುಣವಾಗಿ ಗೇರ್ಗಳನ್ನು ಬದಲಾಯಿಸಬೇಕಾಗುತ್ತದೆ. ಹಾಗೆಯೇ ಖಾಲಿ ರಸ್ತೆಗಳಲ್ಲಿ ವೇಗವಾಗಿ ಹೋಗುತ್ತಿದ್ದರೆ, ಟಾಪ್ ಗೇರ್ನಲ್ಲಿ ಹೋಗಬೇಕು ಮತ್ತು ನಿಧಾನವಾಗಿ ಹೋಗುತ್ತಿದ್ದರೆ ಎರಡನೇ ಅಥವಾ ಮೂರನೇ ಗೇರ್ನಲ್ಲಿ ಹೋಗಬೇಕು. ಹೀಗೆ ಹೋಗುವುದರಿಂದ ದಾರಿಯಲ್ಲಿ ಬೈಕ್ ನಿಲ್ಲಿಸದೇ ಪ್ರಯಾಣ ಸರಾಗವಾಗಿ ಸಾಗುತ್ತದೆ. ಇದು ಮೈಲೇಜ್ ಹೆಚ್ಚಿಸುವಲ್ಲಿಯೂ ಸಹಕಾರಿ.
ಬ್ರೇಕ್ ಮೇಲೆ ಕಾಲಿಟ್ಟು ಓಡಿಸಬೇಡಿ:ಬೈಕ್ ಓಡಿಸುವಾಗ ಅನೇಕರು ಮಾಡುವ ತಪ್ಪೆಂದರೆ, ಬ್ರೇಕ್ ಪೆಡಲ್ ಮೇಲೆ ಕಾಲಿಟ್ಟು ಓಡಿಸುವುದು. ಆದರೆ, ಇದು ಒಂದು ರೀತಿಯಲ್ಲಿ ಒಳ್ಳೆಯದು. ಏಕೆಂದರೆ ಯಾವುದೇ ವಾಹನ ಸಡನ್ ಆಗಿ ಬಂದಾಗ ತಕ್ಷಣ ಬ್ರೇಕ್ ಹಾಕಬೇಕಾಗುತ್ತದೆ. ಆದರೆ, ವಾಹನ ಚಾಲನೆ ಮಾಡುವಾಗ ಸದಾ ಕಾಲನ್ನು ಬ್ರೇಕ್ ಮೇಲೆಯೇ ಇಡುವುದರಿಂದ ಬ್ರೇಕ್ ಮೇಲೆ ಸ್ವಲ್ಪ ಒತ್ತಡ ಬೀಳುತ್ತದೆ. ಹಾಗಾಗಿ ಅಗತ್ಯವಿದ್ದಾಗ ಬ್ರೇಕ್ ಪೆಡಲ್ ಮೇಲೆ ಕಾಲಿಡದೇ ಉಪಯೋಗಿಸುವುದು ಉತ್ತಮ.
ಟೈರ್ ಪರಿಶೀಲನೆ:ಹೆಚ್ಚಿನ ಬೈಕ್ ಸವಾರರು ಮಾಡುವ ಇನ್ನೊಂದು ತಪ್ಪೆಂದರೆ, ಟೈರ್‌ಗಳಲ್ಲಿನ ಗಾಳಿಯ ಒತ್ತಡದ (ಟೈರ್ಗೆ ಸರಿಯಾದ ಪ್ರಮಾಣದಲ್ಲಿ ಗಾಳಿ ತುಂಬಿಸುವುದು) ಬಗ್ಗೆ ನಿರ್ಲಕ್ಷ್ಯ ವಹಿಸುವುದು. ಕೆಲವರು ಬಂಕ್‌ನಲ್ಲಿ ಪೆಟ್ರೋಲ್ ತುಂಬಿಸುವಾಗ ಮಾತ್ರ ಟೈರ್‌ಗಳಲ್ಲಿನ ಗಾಳಿ ಒತ್ತಡ ಪರಿಶೀಲಿಸುತ್ತಾರೆ. ಕೆಲವರು ತಿಂಗಳಿಗೊಮ್ಮೆ ಪರಿಶೀಲಿಸುತ್ತಾರೆ. ಇನ್ನು ಕೆಲವರು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಬೈಕ್ ಟೈರ್ಗಳಿಗೆ ಸರಿಯಾದ ಗಾಳಿಯ ಒತ್ತಡ ಇಲ್ಲದಿದ್ದರೂ ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ.
ಬೈಕ್ ಟೈರ್ನಲ್ಲಿ ಅಗತ್ಯಕ್ಕೆ ತಕ್ಕಂತೆ ಗಾಳಿಯ ಒತ್ತಡವಿಲ್ಲದಿದ್ದರೆ, ಬೈಕ್‌ನ ಎಷ್ಟೇ ವೇಗ ಹೆಚ್ಚಿಸಿದರೂ ವೇಗ ಹೆಚ್ಚಾಗದೇ ಇಂಧನ ವ್ಯರ್ಥವಾಗುತ್ತದೆ. ಹಾಗಾಗಿ ಎರಡು ದಿನಕ್ಕೊಮ್ಮೆ ಟೈರ್ ಏರ್ ಪ್ರೆಶರ್ ಚೆಕ್ ಮಾಡುವುದರಿಂದ ಬೈಕ್ ಮೈಲೇಜ್ ಹೆಚ್ಚಾಗುವುದಲ್ಲದೆ ಇಂಧನ ಬಳಕೆ ಕಡಿಮೆಯಾಗುತ್ತದೆ. ಇದಲ್ಲದೇ ನಿಯಮಿತವಾಗಿ ಬೈಕ್ ಸರ್ವಿಸಿಂಗ್ ಮಾಡುವುದು, ಏರ್ ಫಿಲ್ಟರ್ ಕ್ಲೀನ್ ಮಾಡುವುದು ನಿಮ್ಮ ದ್ವಿಚಕ್ರ ವಾಹನದ ಮೈಲೇಜ್ ಹೆಚ್ಚಿಸಲು ಸಹಕಾರಿ ಎಂದು ತಜ್ಞರು ಸಲಹೆ ನೀಡುತ್ತಾರೆ.
ಇದನ್ನೂ ಓದಿ:ವಿಭಿನ್ನ ಬ್ರ್ಯಾಂಡ್‌ಗಳ ಬೈಕ್ ಓಡಿಸುವ ಕ್ರೇಜ್ ನಿಮಗಿದೆಯೇ?: 5 ಬೆಸ್ಟ್ ಬೈಕ್ ರೆಂಟಲ್ ಆ್ಯಪ್‌ಗಳಿವು - Bike Rental Apps