ನವದೆಹಲಿ:ಫೋರ್ಬ್ಸ್ ಶತಕೋಟ್ಯಧಿಪತಿಗಳ ಪಟ್ಟಿ ಬಿಡುಗಡೆ ಮಾಡಿದೆ. ಐಷಾರಾಮಿ ಬ್ರ್ಯಾಂಡ್ LVMH ಮಾಲೀಕ ಬರ್ನಾರ್ಡ್ ಅರ್ನಾಲ್ಟ್ ಅವರು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. LVMH ಮಾಲೀತ ಅರ್ನಾಲ್ಟ್ ಮತ್ತು ಕುಟುಂಬದ ನಿವ್ವಳ ಆಸ್ತಿ ಮೌಲ್ಯ ಶುಕ್ರವಾರ $23.6 ಶತಕೋಟಿಯಿಂದ $207.8 ಶತಕೋಟಿಗೇರಿದೆ ಎಂದು ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ ಪಟ್ಟಿಯಿಂದ ತಿಳಿದುಬಂದಿದೆ. ಮಸ್ಕ್ ಅವರ ಆಸ್ತಿ $204.5 ಶತಕೋಟಿ ಇದೆ.
ಶುಕ್ರವಾರ ಇಬ್ಬರ ನಿವ್ವಳ ಸಂಪತ್ತಿನ ಮೌಲ್ಯದಲ್ಲಿ ಬದಲಾವಣೆ ಕಂಡುಬಂದಿದೆ. ಒಂದೆಡೆ ಬರ್ನಾರ್ಡ್ ಅವರ ನಿವ್ವಳ ಸಂಪತ್ತಿನ ಮೌಲ್ಯವು $23 ಶತಕೋಟಿಗಳಷ್ಟು ಹೆಚ್ಚಾದರೆ, ಮಸ್ಕ್ ಸಂಪತ್ತು $18 ಶತಕೋಟಿಗಳಷ್ಟು ಕಡಿಮೆಯಾಗಿದೆ. ಎರಡೂ ಕಂಪನಿಗಳ ಷೇರುಗಳಲ್ಲಿನ ಏರಿಳಿತದಿಂದಾಗಿ ಇದು ಸಂಭವಿಸಿದೆ. LVMHನ ಮಾರುಕಟ್ಟೆ ಬಂಡವಾಳ ಶೇ.13ದಿಂದ $388 ಶತಕೋಟಿಗೆ ಏರಿದೆ. ಮೌಲ್ಯ ಕುಸಿತದ ಹೊರತಾಗಿಯೂ ಟೆಸ್ಲಾ ಮಾರುಕಟ್ಟೆ ಕ್ಯಾಪ್ $586 ಶತಕೋಟಿಗೆ ಬಂದು ತಲುಪಿತು.
LVMHನ ಪೂರ್ಣ ಹೆಸರು ಮೊಯೆಟ್ ಹೆನ್ನೆಸ್ಸಿ ಲೂಯಿಸ್ ವಿಟಾನ್. ಲೂಯಿ ವಿಟಾನ್ ಪ್ರಸಿದ್ಧ ಫ್ಯಾಷನ್ ಬ್ರ್ಯಾಂಡ್. ಇದಲ್ಲದೆ ಸೆಫೊರಾ ಈ ಕಂಪನಿಯದ್ದೇ ಬ್ರ್ಯಾಂಡ್ ಆಗಿದೆ. ಕಂಪನಿಯು ಒಟ್ಟು 75 ಫ್ಯಾಶನ್ ಮತ್ತು ಕಾಸ್ಮೆಟಿಕ್ ಬ್ರ್ಯಾಂಡ್‌ಗಳನ್ನು ಹೊಂದಿದೆ. 2021ರಲ್ಲಿ ಲೂಯಿ ವಿಟಾನ್ ಅಮೆರಿಕನ್ ಆಭರಣ ವ್ಯಾಪಾರಿ ಟಿಫಾನಿ & ಕಂ ಅನ್ನು ಸ್ವಾಧೀನಪಡಿಸಿಕೊಂಡರು. ಸುಮಾರು $16 ಬಿಲಿಯನ್ ಮೌಲ್ಯದ ಈ ಒಪ್ಪಂದವನ್ನು ಇತಿಹಾಸದಲ್ಲಿ ಅತಿದೊಡ್ಡ ಐಷಾರಾಮಿ ಬ್ರ್ಯಾಂಡ್ ಸ್ವಾಧೀನ ಎಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲ, Netflix ಮತ್ತು ByteDanceನಂತಹ ಕಂಪನಿಗಳಲ್ಲಿ ಹೂಡಿಕೆಗಳನ್ನು ಇಂದು ಹೊಂದಿದೆ.