ನವದೆಹಲಿ: ಭಾರತೀಯ ನಾಗರಿಕರ ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರಗಳು ಸೇರಿದಂತೆ ಸೂಕ್ಷ್ಮ ವೈಯಕ್ತಿಕ ಮಾಹಿತಿಗಳನ್ನು ಬಹಿರಂಗಪಡಿಸುವ ಕೆಲ ವೆಬ್ ಸೈಟ್ಗಳನ್ನು ಸರ್ಕಾರ ನಿರ್ಬಂಧಿಸಿದೆ. ಗುರುವಾರ ಸರ್ಕಾರ ಅಧಿಕೃತವಾಗಿ ಈ ಮಾಹಿತಿ ನೀಡಿದೆ. ಈ ವೆಬ್ಸೈಟ್ಗಳಲ್ಲಿ ಭದ್ರತಾ ಲೋಪಗಳು ಕಂಡು ಬಂದಿವೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್ಟಿ-ಇನ್) ಹೇಳಿದೆ. ಇದರ ನಂತರ ಸರ್ಕಾರವು ಈ ವೆಬ್ ಸೈಟ್ಗಳನ್ನು ನಿರ್ಬಂಧಿಸಿದೆ.
ಜನರ ಡೇಟಾ ಮಾರಾಟ ಮಾಡುವ ವೆಬ್ಸೈಟ್ಗಳು: "ಕೆಲ ವೆಬ್ಸೈಟ್ಗಳು ಭಾರತೀಯ ನಾಗರಿಕರ ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರಗಳು ಸೇರಿದಂತೆ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುತ್ತಿವೆ ಎಂಬ ವಿಚಾರ ಸಚಿವಾಲಯದ ಗಮನಕ್ಕೆ ಬಂದಿದೆ. ಸುರಕ್ಷಿತ ಸೈಬರ್ ಭದ್ರತಾ ಕ್ರಮಗಳು ಮತ್ತು ವೈಯಕ್ತಿಕ ಡೇಟಾದ ರಕ್ಷಣೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೀಗಾಗಿ ಈ ವೆಬ್ಸೈಟ್ಗಳನ್ನು ನಿರ್ಬಂಧಿಸಲು ತ್ವರಿತ ಕ್ರಮ ಕೈಗೊಳ್ಳಲಾಗಿದೆ." ಎಂದು ಸರ್ಕಾರ ಹೇಳಿದೆ.
ಪೊಲೀಸರಿಗೆ ದೂರು ಸಲ್ಲಿಕೆ: ಆಧಾರ್ (ಹಣಕಾಸು ಮತ್ತು ಇತರ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉದ್ದೇಶಿತ ವಿತರಣೆ) ಕಾಯ್ದೆ, 2016 ರ ಅಡಿ ಆಧಾರ್ ಸಂಬಂಧಿತ ವಿವರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ನಿಷೇಧಿಸುವ ನಿಬಂಧನೆ ಉಲ್ಲಂಘಿಸಿದ್ದಕ್ಕಾಗಿ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ವು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದೆ.