ನವದೆಹಲಿ: ಡಿಜಿಟಲ್ ಭಾರತ ಮೂಲಸೌಕರ್ಯಗಳು ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು, ಇಲ್ಲಿಯವರೆಗೆ 138.34 ಕೋಟಿ ಆಧಾರ್ ಸಂಖ್ಯೆಗಳನ್ನು ನೀಡಲಾಗಿದೆ ಎಂದು ಸರ್ಕಾರ ಭಾನುವಾರ ಪ್ರಕಟಿಸಿದೆ. ಹಾಗೆಯೇ ಡಿಜಿಟಲ್ ಡಾಕ್ಯುಮೆಂಟ್ ವೆರಿಫಿಕೇಶನ್ ವೇದಿಕೆಯಾದ ಡಿಜಿಲಾಕರ್ನಲ್ಲಿ 37.046 ಬಳಕೆದಾರರು ತಮ್ಮ 776 ಕೋಟಿ ದಾಖಲೆಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ.
ದೀಕ್ಷಾ: ವಿಶ್ವದ ಅತಿದೊಡ್ಡ ಶಿಕ್ಷಣ ವೇದಿಕೆಯಾದ ಡಿಜಿಟಲ್ ಇನ್ ಫ್ರಾಸ್ಟ್ರಕ್ಚರ್ ಫಾರ್ ನಾಲೆಡ್ಜ್ ಶೇರಿಂಗ್ (ದೀಕ್ಷಾ) 556.37 ಕೋಟಿ ಕಲಿಕಾ ತರಬೇತಿಗಳನ್ನು ನೀಡಲು ಸಹಾಯ ಮಾಡಿದೆ. ಇದು 17.95 ಕೋಟಿ ಕೋರ್ಸ್ ದಾಖಲಾತಿ ಮತ್ತು 14.37 ಕೋಟಿ ಕೋರ್ಸ್ ಪೂರ್ಣಗೊಳಿಸುವಿಕೆಯನ್ನು ಸಾಧಿಸಿದೆ ಎಂದು ಸರ್ಕಾರ ತಿಳಿಸಿದೆ.
ಯುಪಿಐ ಬೆಳವಣಿಗೆ: ಇನ್ನು ಯುಪಿಐ ವ್ಯವಸ್ಥೆ ಕೂಡ ಗಮನಾರ್ಹ ಬೆಳವಣಿಗೆ ಸಾಧಿಸಿದ್ದು, ಅಕ್ಟೋಬರ್ನಲ್ಲಿ 16.58 ಬಿಲಿಯನ್ ವಹಿವಾಟುಗಳು ಮತ್ತು 23.50 ಲಕ್ಷ ಕೋಟಿ ರೂ.ಗಳ ಮೌಲ್ಯದ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ ನಂತರ, ನವೆಂಬರ್ನಲ್ಲಿ 15.48 ಬಿಲಿಯನ್ ವಹಿವಾಟುಗಳು (ವರ್ಷದಿಂದ ವರ್ಷಕ್ಕೆ 38 ಶೇಕಡಾ) ನಡೆದಿದ್ದು, ಇದರ ಮೌಲ್ಯ 21.55 ಲಕ್ಷ ಕೋಟಿ ರೂ. ಆಗಿದೆ. 2025 ರ ಅಂತ್ಯದ ವೇಳೆಗೆ ಯುಪಿಐ ವಹಿವಾಟುಗಳ ಸಂಖ್ಯೆ ತಿಂಗಳಿಗೆ 25 ಬಿಲಿಯನ್ಗೆ ತಲುಪುವ ನಿರೀಕ್ಷೆಯಿದೆ.
ಡೇಟಾ ಕೇಂದ್ರಗಳ ಪಾತ್ರ: ಡೇಟಾ ಕೇಂದ್ರಗಳ ವಿಸ್ತರಣೆ ಮತ್ತು ಅಭಿವೃದ್ಧಿಯು ಭಾರತದ ಡಿಜಿಟಲ್ ಮೂಲಸೌಕರ್ಯದ ಕೇಂದ್ರ ಸ್ತಂಭಗಳಲ್ಲಿ ಒಂದಾಗಿದೆ. ಭಾರತದ ಡೇಟಾ ಸೆಂಟರ್ ಉದ್ಯಮವು ಗಣನೀಯ ಬೆಳವಣಿಗೆಗೆ ಸಜ್ಜಾಗಿದೆ. ಭಾರತದ ಐಟಿ ಲೋಡ್ ಸಾಮರ್ಥ್ಯ ಪ್ರಸ್ತುತ ಸರಿಸುಮಾರು 1000 ಮೆಗಾವ್ಯಾಟ್ ಆಗಿದೆ.