ನವದೆಹಲಿ: ಈ ವರ್ಷದ ಜನವರಿಯಿಂದ ಆಗಸ್ಟ್ ಅವಧಿಯಲ್ಲಿ ಸುಮಾರು 61.91 ಲಕ್ಷ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದಾರೆ ಎಂದು ಸರ್ಕಾರ ಸೋಮವಾರ ತಿಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 59.71 ಲಕ್ಷ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದರು.
ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನದಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕಳೆದ ವರ್ಷ ಒಟ್ಟು ವಿದೇಶಿ ಪ್ರವಾಸಿಗರ ಆಗಮನ (ಎಫ್ ಟಿಎ) 9.52 ಮಿಲಿಯನ್ (90.52 ಲಕ್ಷ) ಆಗಿತ್ತು ಎಂದು ಹೇಳಿದರು.
ಪ್ರವಾಸೋದ್ಯಮ ಕ್ಷೇತ್ರವು 2022-23ರಲ್ಲಿ ದೇಶದ ಜಿಡಿಪಿಗೆ ಶೇಕಡಾ 5 ರಷ್ಟು ಕೊಡುಗೆ ನೀಡಿದೆ. ಇದು 2021 - 22 ರಲ್ಲಿ ಇದ್ದುದಕ್ಕಿಂತ ಶೇಕಡಾ 1.75 ರಷ್ಟು ಗಮನಾರ್ಹ ಹೆಚ್ಚಳವಾಗಿದೆ. "ಬೃಹತ್ ಸಂಖ್ಯೆಯಲ್ಲಿರುವ ಭಾರತೀಯ ವಲಸಿಗರನ್ನು ಇನ್ ಕ್ರೆಡಿಬಲ್ ಇಂಡಿಯಾ ಅಭಿಯಾನದ ರಾಯಭಾರಿಗಳಾಗುವಂತೆ ಪ್ರೋತ್ಸಾಹಿಸಲು ಮತ್ತು ಅವರ ಐದು ಭಾರತೀಯೇತರ ಸ್ನೇಹಿತರು ಪ್ರತಿವರ್ಷ ಭಾರತಕ್ಕೆ ಭೇಟಿ ನೀಡುವಂತೆ ಪ್ರೋತ್ಸಾಹಿಸಲು ಸಚಿವಾಲಯವು ಚಲೋ ಇಂಡಿಯಾ ಉಪಕ್ರಮವನ್ನು ಪ್ರಾರಂಭಿಸಿದೆ" ಎಂದು ಸಚಿವರು ಮಾಹಿತಿ ನೀಡಿದರು.
ಭಾರತೀಯ ವಲಸಿಗರ ನೋಂದಣಿಗಾಗಿ ಚಲೋ ಇಂಡಿಯಾ ಪೋರ್ಟಲ್ ಅನ್ನು ಸಹ ಅಭಿವೃದ್ಧಿಪಡಿಸಲಾಗಿದೆ. ಸುಮಾರು ಐದು ಮಿಲಿಯನ್ ಒಸಿಐ ಕಾರ್ಡ್ದಾರರಿರುವುದು ಗಮನಾರ್ಹ. ಒಸಿಐ ಹೊಂದಿರುವ ಪ್ರತಿಯೊಬ್ಬರು ಐದು ಜನರನ್ನು ನಾಮ ನಿರ್ದೇಶನ ಮಾಡಬಹುದಾದರೂ, ಈ ಉಪಕ್ರಮದ ಅಡಿ ನೀಡಬೇಕಾದ ಒಟ್ಟು ಉಚಿತ ಇ - ವೀಸಾಗಳ ಸಂಖ್ಯೆ ಒಂದು ಲಕ್ಷದಷ್ಟಿದೆ.