ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಜನವರಿಯಿಂದ ಮೇ ಅವಧಿಯಲ್ಲಿ ಭಾರತಕ್ಕೆ ಆಗಮಿಸಿದ ವಿದೇಶಿ ಪ್ರವಾಸಿಗರ ಸಂಖ್ಯೆ ಶೇ 9.1ರಷ್ಟು ಏರಿಕೆಯಾಗಿ 40.72 ಲಕ್ಷಕ್ಕೆ ತಲುಪಿದೆ ಎಂದು ಸೋಮವಾರ ಸಂಸತ್ತಿಗೆ ಮಾಹಿತಿ ನೀಡಲಾಯಿತು. ಕಳೆದ ವರ್ಷದ ಇದೇ ಅವಧಿಯಲ್ಲಿ 37.32 ಲಕ್ಷ ವಿದೇಶಿ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದರು.
ಈ ಅವಧಿಯಲ್ಲಿ ದೇಶಕ್ಕೆ 1,08,362 ಕೋಟಿ ರೂ.ಗಳಷ್ಟು ವಿದೇಶಿ ವಿನಿಮಯ (ಎಫ್ಇಇ) ಗಳಿಕೆಯಾಗಿದೆ. 2023ರ ಜನವರಿಯಿಂದ ಮೇ ತಿಂಗಳಲ್ಲಿ ಈ ಪ್ರಮಾಣ 88,441 ಕೋಟಿ ರೂ. ಆಗಿತ್ತು. ವಿದೇಶಿ ವಿನಿಮಯ ಗಳಿಕೆ ವರ್ಷದಿಂದ ವರ್ಷಕ್ಕೆ ಶೇಕಡಾ 22.52ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಲೋಕಸಭೆಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.
ಈ ವರ್ಷದ ಮೇ ತಿಂಗಳಲ್ಲಿ ವಿದೇಶಿ ವಿನಿಮಯ ಗಳಿಕೆ 17,762 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷ ಮೇ ತಿಂಗಳಲ್ಲಿ ಇದು 17,206 ಕೋಟಿ ರೂ.ಗಳಷ್ಟಿತ್ತು. ಹಾಗೆಯೇ ಮೇ ತಿಂಗಳಲ್ಲಿ 6 ಲಕ್ಷ ವಿದೇಶಿ ಪ್ರವಾಸಿಗರು ದೇಶಕ್ಕೆ ಆಗಮಿಸಿದ್ದಾರೆ. 2023ರ ಮೇ ತಿಂಗಳಲ್ಲಿ ಬಂದಿದ್ದ 5.98 ಲಕ್ಷಕ್ಕೆ ಹೋಲಿಸಿದರೆ ಪ್ರವಾಸಿಗರ ಸಂಖ್ಯೆ ಈ ವರ್ಷ ಶೇಕಡಾ 0.3ರಷ್ಟು ಏರಿಕೆಯಾಗಿದೆ.
ವಿದೇಶಿ ಪ್ರವಾಸಿಗರ ಆಗಮನ ಮತ್ತು ವಿದೇಶಿ ವಿನಿಮಯ ಗಳಿಕೆ ಸ್ಥಿರವಾಗಿ ಏರಿಕೆಯಾಗುತ್ತಿರುವುದು ಪ್ರವಾಸೋದ್ಯಮ ವಿಸ್ತಾರವಾಗುತ್ತಿರುವುದನ್ನು ಸೂಚಿಸುತ್ತದೆ ಎಂದು ಸಚಿವರು ಹೇಳಿದರು.