ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶನ ಹಂಚಿಕೆ ಹಗರಣದ ತನಿಖೆಗಾಗಿ ರಾಜ್ಯ ಸರ್ಕಾರ ನೇಮಿಸಿರುವ ಏಕಸದಸ್ಯ ನ್ಯಾಯಾಂಗ ಆಯೋಗದ ಅಧ್ಯಕ್ಷರಾಗಿರುವ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರನ್ನು ಮುಂದಿನ ಮೂರು ವರ್ಷಗಳ ಕಾಲ ಸರ್ಕಾರದ ಎಲ್ಲಾ ನೇಮಕಾತಿಗಳಿಂದ ಡಿಬಾರ್ ಮಾಡಿ ಹೊರಡಿಸಿರುವ ಕೇಂದ್ರ ಸರ್ಕಾರದ ಆಕ್ಷೇಪಾರ್ಹ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2024ರ ನವೆಂಬರ್ 7ರಂದು ಡಿಬಾರ್ ಮಾಡಿರುವ ಆದೇಶ ಪ್ರಶ್ನಿಸಿ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಕೇಂದ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಮತ್ತು ಎಸ್ಟಾಬ್ಲಿಷ್ಮೆಂಟ್ ಅಧಿಕಾರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಆಕ್ಷೇಪಾರ್ಹ ಆದೇಶಕ್ಕೆ ಮುಂದಿನ ವಿಚಾರಣೆವರೆಗೆ ಏಕಪಕ್ಷೀಯ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರ ನ್ಯಾ. ದೇಸಾಯಿ ಪರ ವಕೀಲರು, ಅರ್ಜಿದಾರರು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯಾಗಿದ್ದು, ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯ ಹೈದರಾಬಾದ್ ಪೀಠದ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡಿದ್ದಕ್ಕೆ ರಾಷ್ಟ್ರಪತಿ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿ ಆಗಸ್ಟ್ 14ರಂದು ಪತ್ರ ಬರೆದಿದ್ದಾರೆ. ಇದರಲ್ಲಿ ಮುಡಾ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ನೀಡಿರುವ ಜವಾಬ್ದಾರಿ ನಿಭಾಯಿಸುತ್ತಿದ್ದು, ಆರು ತಿಂಗಳಲ್ಲಿ ಜವಾಬ್ದಾರಿ ಮುಗಿಯಲಿದೆ. ಹೀಗಾಗಿ, ಸದ್ಯಕ್ಕೆ ಕೇಂದ್ರ ಸರ್ಕಾರದ ನೇಮಕಾತಿಯನ್ನು ನಿರಾಕರಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದರು.
ಅಲ್ಲದೇ, ನೇಮಕಾತಿ ಪ್ರಸ್ತಾವವನ್ನು ಸಂಪುಟ ನೇಮಕಾತಿ ಸಮಿತಿಗೆ ಕಳುಹಿಸುವುದಕ್ಕೂ ಮುನ್ನ ಆಯ್ಕೆಯಾಗಿರುವವರ ಒಪ್ಪಿಗೆ ಪಡೆಯಬೇಕಿತ್ತು. ಆದರೆ, ಅದನ್ನು ಮಾಡಲಾಗಿಲ್ಲ. ಇದಾದ ಬಳಿಕ 30 ದಿನಗಳಲ್ಲಿ ನೇಮಕವಾದವರು ಕರ್ತವ್ಯಕ್ಕೆ ಹಾಜರಾಗದಿದ್ದರೆ 15 ದಿನಗಳ ಕಾಲಾವಕಾಶ ನೀಡಿ ನೋಟಿಸ್ ಜಾರಿ ಮಾಡಬೇಕು. ಅದಾಗ್ಯೂ ಅವರೂ ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಡಿಬಾರ್ ಮಾಡಬಹುದು. ಆದರೆ, ಅರ್ಜಿದಾರರು ಆಯ್ಕೆಯಾದ ಬಳಿಕ ಅವರ ಒಪ್ಪಿಗೆ ಪಡೆದಿಲ್ಲ, ಡಿಬಾರ್ ಮಾಡುವುದಕ್ಕೂ ಮುನ್ನ ನೋಟಿಸ್ ಸಹ ನೀಡಿಲ್ಲ. ಅರ್ಜಿದಾರರನ್ನು ಸಿಎಟಿ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡುವುದರಿಂದ ಡಿಬಾರ್ ಮಾಡಲಾಗಿದೆ ಎಂಬ ಮಾಹಿತಿಯನ್ನು ಮಾಧ್ಯಮಗಳು ಪ್ರಕಟಿಸಿದೆ. ಹೀಗಾಗಿ, ಡಿಬಾರ್ ಮಾಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಪೀಠಕ್ಕೆ ಕೋರಿದರು.
ಅರ್ಜಿದಾರರು ಸಿಎಟಿಗೆ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಇದಾದ ಆರು ತಿಂಗಳು ಕೇಂದ್ರ ಸರ್ಕಾರ ಏನನ್ನೂ ಮಾಡಿಲ್ಲ. ಈ ಮಧ್ಯೆ, ಮುಡಾ ಹಗರಣದ ತನಿಖೆಗಾಗಿ ರಾಜ್ಯ ಸರ್ಕಾರ ಅರ್ಜಿದಾರರ ನೇತೃತ್ವದಲ್ಲಿ ಏಕ ಸದಸ್ಯ ನ್ಯಾಯಾಂಗ ಆಯೋಗ ರಚಿಸಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರ ಸಿಎಟಿ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ನೇಮಕಾತಿ ಪತ್ರ ಕಳುಹಿಸಿತ್ತು. ಮುಡಾ ಹಗರಣದ ತನಿಖೆಗೆ ಆರು ತಿಂಗಳ ಗಡುವು ನೀಡಿದ್ದು, ಅದು ಮುಗಿದ ಬಳಿಕ ಸಿಎಟಿ ಜವಾಬ್ದಾರಿ ಪಡೆದುಕೊಳ್ಳುವುದಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ, ಕೇಂದ್ರ ಸರ್ಕಾರವು ಅರ್ಜಿದಾರರನ್ನು ಮೂರು ವರ್ಷಗಳ ಕಾಲ ಡಿಬಾರ್ ಮಾಡಿದೆ ಎಂದು ಎಂದು ಪೀಠಕ್ಕೆ ತಿಳಿಸಿದರು.
ಅಲ್ಲದೇ, ಅರ್ಜಿದಾರರ ವಾದವನ್ನು ಆಲಿಸದೇ ಡಿಬಾರ್ ಮಾಡಲಾಗಿದೆ. ಆದರೆ, ಕೇಂದ್ರ ಸರ್ಕಾರದ ಆದೇಶದಲ್ಲಿ ವೈಯಕ್ತಿಕ ಕಾರಣಕ್ಕೆ ಹೈದರಾಬಾದ್ ಸಿಎಟಿ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿರುವುದಾಗಿ ಆಕ್ಷೇಪಾರ್ಹ ಆದೇಶದಲ್ಲಿ ವಿವರಿಸಲಾಗಿದೆ. ಇಲ್ಲಿ ಯಾವುದೇ ವೈಯಕ್ತಿಕ ಕಾರಣಗಳು ಇಲ್ಲ. ಮುಡಾ ಹಗರಣದ ತನಿಖಾ ಜವಾಬ್ದಾರಿ ಮುಗಿಸಿ, ಸಿಎಟಿ ನೇಮಕಾತಿ ಒಪ್ಪಿಕೊಳ್ಳುವುದಾಗಿ ಅಲ್ಲಿಯವರೆಗೆ ನೇಮಕಾತಿ ಮುಂದೂಡುವಂತೆ ಪತ್ರ ಬರೆಯಲಾಗಿದೆ. ಆದರೆ ವೈಯಕ್ತಿಕ ಸಮಾಲೋಚನೆ ನಡೆಸದೇ ಡಿಬಾರ್ ಮಾಡಲಾಗಿದೆ ಎಂದು ಪೀಠಕ್ಕೆ ವಿವರಿಸಿದರು.
ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಅರ್ಜಿದಾರರನ್ನು ಡಿಬಾರ್ ಮಾಡುವ ನಿರ್ಧಾರವನ್ನು ಸಂಪುಟದ ನೇಮಕಾತಿ ಸಮಿತಿಯು ಕೈಗೊಂಡಿದೆ. ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ನ್ಯಾ. ದೇಸಾಯಿ ಅವರನ್ನು ಸರ್ಕಾರದ ಯಾವುದೇ ಸ್ವಾಯತ್ತ, ಶಾಸನಬದ್ಧ ಅಥವಾ ನಿಯಂತ್ರಣ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಲು 2024ರ ಅಕ್ಟೋಬರ್ 21ರಿಂದ ಪೂರ್ವಾನ್ವಯವಾಗುವಂತೆ ಡಿಬಾರ್ ಮಾಡಿ ಆದೇಶಿಸಲಾಗಿತ್ತು.
ಇದನ್ನೂ ಓದಿ: ಮುಡಾ ಪ್ರಕರಣ: ಮಾಜಿ ಆಯುಕ್ತ ನಟೇಶ್ಗೆ ಇ.ಡಿ ಜಾರಿ ಮಾಡಿದ್ದ ನೋಟಿಸ್ ರದ್ದುಗೊಳಿಸಿದ ಹೈಕೋರ್ಟ್
ಇದನ್ನೂ ಓದಿ: ಮುಡಾ ಹಗರಣ ಸಿಬಿಐಗೆ ವಹಿಸಲು ಕೋರಿದ್ದ ಅರ್ಜಿಗೆ ಸಿದ್ದರಾಮಯ್ಯ & ಅವರ ಪತ್ನಿ, ಬಾವಮೈದುನ ಆಕ್ಷೇಪ