ಕರ್ನಾಟಕ

karnataka

ETV Bharat / business

ಯುರೋಪ್ ರಾಷ್ಟ್ರಗಳೊಂದಿಗೆ $100 ಬಿಲಿಯನ್ ಹೂಡಿಕೆ ಒಪ್ಪಂದ: 10 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ - India signs economic pact

ಮುಂದಿನ 15 ವರ್ಷಗಳಲ್ಲಿ 100 ಬಿಲಿಯನ್ ಹೂಡಿಕೆಯ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ.

$100 billion investment deal with European countries
$100 billion investment deal with European countries

By ETV Bharat Karnataka Team

Published : Mar 10, 2024, 2:29 PM IST

ನವದೆಹಲಿ: ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ್​​ನ ನಾಲ್ಕು ರಾಷ್ಟ್ರಗಳ ಇಎಫ್​ಟಿಎ ಗುಂಪಿನೊಂದಿಗೆ ಭಾರತವು ಭಾನುವಾರ ಪ್ರಮುಖ ಆರ್ಥಿಕ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಸ್ವಿಟ್ಜರ್ಲೆಂಡ್, ನಾರ್ವೆ, ಐಸ್​ಲ್ಯಾಂಡ್ ಮತ್ತು ಲಿಚೆನ್ ಸ್ಟೀನ್​ ರಾಷ್ಟ್ರಗಳನ್ನು ಒಳಗೊಂಡ ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ್ (ಇಎಫ್​ಟಿಎ) ನೊಂದಿಗೆ ವ್ಯಾಪಾರ ಮತ್ತು ವಿದೇಶಿ ಹೂಡಿಕೆಯನ್ನು ಹೆಚ್ಚಿಸುವ ಆರ್ಥಿಕ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ. 16 ವರ್ಷಗಳ ಕಾಲ ನಡೆದ ಮಾತುಕತೆಗಳ ನಂತರ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಒಡಂಬಡಿಕೆ ಸಮಾರಂಭದ ನಂತರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಈ ಬಗ್ಗೆ ಮಾಹಿತಿ ನೀಡಿದರು.

ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದ (ಟಿಇಪಿಎ) (The Trade and Economic Partnership Agreement -TEPA)ದ ಅನ್ವಯ, ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾದ ಭಾರತದಲ್ಲಿ ಮುಂದಿನ 15 ವರ್ಷಗಳಲ್ಲಿ ಇಎಫ್​ಟಿಎ ರಾಷ್ಟ್ರಗಳು 100 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಬದ್ಧವಾಗಿರಲಿವೆ ಎಂದು ಗೋಯಲ್ ಹೇಳಿದರು.

ಈ ಒಪ್ಪಂದದಿಂದ ಭಾರತಕ್ಕೆ ಹೆಚ್ಚಿನ ವಿದೇಶಿ ಬಂಡವಾಳ ಮತ್ತು ಹೊಸ ತಂತ್ರಜ್ಞಾನ ಹರಿದು ಬರಲಿದೆ. ಇದು ದೇಶದಲ್ಲಿ ಉತ್ಪಾದನೆಯನ್ನು ಹೆಚ್ಚಿಸಿ, ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಸ್ವಿಟ್ಜರ್ಲೆಂಡ್​ನ ಆರ್ಥಿಕ ವ್ಯವಹಾರಗಳ ಸಚಿವ ಗೈ ಪಾರ್ಮೆಲಿನ್ ಹೇಳಿದರು. ಇದು 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ಇನ್ನಷ್ಟು ವೇಗ ನೀಡಲಿದೆ ಎಂದು ಅವರು ತಿಳಿಸಿದರು.

ಯುರೋಪಿಯನ್ ದೇಶಗಳ ದೃಷ್ಟಿಯಿಂದ ನೋಡುವುದಾದರೆ, ಈ ಒಪ್ಪಂದವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿರುವ ಭಾರತದ ವಿಶಾಲ ಮಾರುಕಟ್ಟೆಗೆ ಪ್ರವೇಶಿಸಲು ಮತ್ತು ಆರ್ಥಿಕ ಲಾಭ ಪಡೆಯಲು ಯುರೋಪಿಯನ್ ದೇಶಗಳಿಗೆ ಅವಕಾಶ ನೀಡಲಿದೆ ಎಂದು ಅವರು ಹೇಳಿದರು.

ಒಪ್ಪಂದ ಅನುಷ್ಠಾನವಾದ ನಂತರ ಮೊದಲ 10 ವರ್ಷಗಳಲ್ಲಿ ಗುಂಪಿನ ಸದಸ್ಯ ರಾಷ್ಟ್ರಗಳು ಭಾರತದಲ್ಲಿ 50 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಮತ್ತು ಅದರ ಮುಂದಿನ 5 ವರ್ಷಗಳಲ್ಲಿ ಮತ್ತೆ 50 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಬದ್ಧತೆಯನ್ನು ಪ್ರದರ್ಶಿಸುವಂತೆ ಭಾರತ ಕೋರಿದೆ. ಈ ಹೂಡಿಕೆಯ ಮೂಲಕ ದೇಶದಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ಹಾಗೂ ಅದರಿಂದ ಒಂದು ಮಿಲಿಯನ್ ನೇರ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯನ್ನು ಭಾರತ ಹೊಂದಿದೆ.

ಯುರೋಪಿಯನ್ ರಾಷ್ಟ್ರಗಳ ಗುಂಪು ಮತ್ತು ಭಾರತದ ಮಧ್ಯೆ ಏರ್ಪಟ್ಟ ಒಪ್ಪಂದವನ್ನು ಸ್ವಾಗತಿಸಿರುವ ಪ್ರಧಾನಿ ನರೇಂದ್ರ ಮೋದಿ, "ನಮ್ಮ ಮಧ್ಯೆ ಹಲವಾರು ರಚನಾತ್ಮಕ ವೈವಿಧ್ಯತೆಗಳಿದ್ದರೂ, ನಮ್ಮ ಆರ್ಥಿಕತೆಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಹೀಗಾಗಿ ಈ ಒಪ್ಪಂದವು ಎಲ್ಲ ಪಾಲುದಾರ ರಾಷ್ಟ್ರಗಳಿಗೆ ಲಾಭದಾಯಕವೇ ಆಗಿದೆ. ಒಪ್ಪಂದದ ಮೂಲಕ ಅಗಾಧವಾದ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳನ್ನು ತೆರೆಯುವುದರೊಂದಿಗೆ, ನಾವು ವಿಶ್ವಾಸ ಮತ್ತು ಮಹತ್ವಾಕಾಂಕ್ಷೆಯ ಹೊಸ ಮಟ್ಟವನ್ನು ತಲುಪಿದ್ದೇವೆ. ವ್ಯಾಪಾರ ಒಪ್ಪಂದವು ನ್ಯಾಯಯುತ, ಸಮಾನ ವ್ಯಾಪಾರ ವೇದಿಕೆಯನ್ನು ನಿರ್ಮಿಸುವ ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿಸುವ ನಮ್ಮೆಲ್ಲರ ಒಂದೇ ಗುರಿಯನ್ನು ಸಂಕೇತಿಸುತ್ತದೆ." ಎಂದು ಹೇಳಿದ್ದಾರೆ.

"ಭಾರತವು ಇಎಫ್​ಟಿಎ ದೇಶಗಳಿಗೆ ಸಾಧ್ಯವಿರುವ ಎಲ್ಲ ಬೆಂಬಲ ನೀಡಲಿದೆ ಮತ್ತು ಉದ್ಯಮ ಮತ್ತು ವ್ಯವಹಾರಗಳಿಗೆ ಬದ್ಧ ಗುರಿಗಳನ್ನು ಸಾಧಿಸಲು ಮಾತ್ರವಲ್ಲದೆ ಅವುಗಳನ್ನು ಮೀರಿ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಅನುಕೂಲ ಮಾಡಿಕೊಡಲಿದೆ. ಈ ಒಪ್ಪಂದವು ನಮ್ಮೆಲ್ಲರಿಗೂ ಹೆಚ್ಚು ಸಮೃದ್ಧ ಭವಿಷ್ಯದತ್ತ ಹೊಸ ಅಧ್ಯಾಯದ ಆರಂಭವನ್ನು ಸೂಚಿಸಲಿ." ಎಂದು ಪ್ರಧಾನಿ ಆಶಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ರೈಲಿನಲ್ಲಿ ಪ್ರಯಾಣಿಸುತ್ತಿರುವವರಿಗೂ 'ಫುಡ್ ಡೆಲಿವರಿ' ಮಾಡಲಿದೆ ಸ್ವಿಗ್ಗಿ: ಆರ್ಡರ್ ಮಾಡುವುದು ಹೇಗೆ ಗೊತ್ತಾ?

ABOUT THE AUTHOR

...view details