ಕರ್ನಾಟಕ

karnataka

ETV Bharat / business

ಏಪ್ರಿಲ್​ನಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಗೆ 1.1 ಲಕ್ಷ ಹೊಸ ನೌಕರರ ಸೇರ್ಪಡೆ - National Pension Scheme - NATIONAL PENSION SCHEME

ರಾಷ್ಟ್ರೀಯ ಪಿಂಚಣಿ ಯೋಜನೆಗೆ ಏಪ್ರಿಲ್ ತಿಂಗಳಲ್ಲಿ 1.1 ಹೊಸ ಚಂದಾದಾರರು ಸೇರ್ಪಡೆಯಾಗಿದ್ದಾರೆ.

ರಾಷ್ಟ್ರೀಯ ಪಿಂಚಣಿ ಯೋಜನೆಗೆ 1.1 ಲಕ್ಷ ಹೊಸ ನೌಕರರ ಸೇರ್ಪಡೆ
ರಾಷ್ಟ್ರೀಯ ಪಿಂಚಣಿ ಯೋಜನೆಗೆ 1.1 ಲಕ್ಷ ಹೊಸ ನೌಕರರ ಸೇರ್ಪಡೆ (IANS (ಸಾಂದರ್ಭಿಕ ಚಿತ್ರ))

By ETV Bharat Karnataka Team

Published : Jun 26, 2024, 12:40 PM IST

ನವದೆಹಲಿ : ಈ ವರ್ಷದ ಏಪ್ರಿಲ್​ನಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಗೆ (ಎನ್​ಪಿಎಸ್​) 1,10,655 ಹೊಸ ಚಂದಾದಾರರು ಸೇರ್ಪಡೆಯಾಗಿದ್ದಾರೆ ಎಂದು ರಾಷ್ಟ್ರೀಯ ಅಂಕಿ - ಅಂಶಗಳ ಕಚೇರಿಯ ಪ್ರಕಟಣೆ ತಿಳಿಸಿದೆ. ಚಂದಾದಾರರ ಹೆಚ್ಚಳವು ಎನ್​ಪಿಎಸ್​ ಬಗ್ಗೆ ಹೆಚ್ಚುತ್ತಿರುವ ಆಕರ್ಷಣೆಯನ್ನು ತೋರಿಸುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಈ ಹೊಸ ಚಂದಾದಾರರಲ್ಲಿ ಸುಮಾರು ಮೂರನೇ ಎರಡರಷ್ಟು ನೌಕರರು ರಾಜ್ಯಗಳ ಸರ್ಕಾರಿ ನೌಕರರಾಗಿದ್ದಾರೆ ಎಂದು ಡೇಟಾ ತೋರಿಸಿದೆ. ಅಂಕಿವಾರು ನೋಡುವುದಾದರೆ- ಹೊಸ ಚಂದಾದಾರರ ಪೈಕಿ ರಾಜ್ಯ ಸರ್ಕಾರಗಳ ನೌಕರರು 79,876 ರಷ್ಟಿದ್ದರೆ, ಕೇಂದ್ರ ಸರ್ಕಾರಿ ನೌಕರರು 20,000 ರಷ್ಟಿದ್ದಾರೆ. ಹಾಗೆಯೇ ಏಪ್ರಿಲ್ ತಿಂಗಳಲ್ಲಿ ಕಾರ್ಪೊರೇಟ್ ವಲಯದ 10,250 ಚಂದಾದಾರರು ಎನ್​ಪಿಎಸ್​ಗೆ ಸೇರ್ಪಡೆಯಾಗಿದ್ದಾರೆ.

ಹೊಸ ಚಂದಾದಾರರ ಪೈಕಿ 43.8 ಪ್ರತಿಶತ (48,530) ದಷ್ಟು ನೌಕರರು 18 ರಿಂದ 28 ವಯೋಮಾನದವರಾಗಿದ್ದಾರೆ. ಇದು ದೇಶದಲ್ಲಿ ನೌಕರಿಗಳ ಸಂಖ್ಯೆ ಹೆಚ್ಛಾಗುತ್ತಿರುವುದನ್ನು ಸೂಚಿಸುತ್ತದೆ. ಚುನಾವಣೆಯ ಸಮಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣದಿಂದ ಮೂರು ತಿಂಗಳ ಅಂತರದ ನಂತರ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಮಂಗಳವಾರ ಸಂಕಲಿತ ವೇತನದಾರರ ಡೇಟಾವನ್ನು ಬಿಡುಗಡೆ ಮಾಡಿದೆ.

ಒಟ್ಟಾರೆಯಾಗಿ 2023-24ರಲ್ಲಿ 9,37,000 ಚಂದಾದಾರರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ ಸೇರಿದ್ದಾರೆ. ಇದು 2022-23ರಲ್ಲಿ ಸೇರ್ಪಡೆಯಾಗಿದ್ದ 8,24,700 ಹೊಸ ಚಂದಾದಾರರಿಗಿಂತ ಶೇಕಡಾ 13.6 ರಷ್ಟು ಹೆಚ್ಚಾಗಿದೆ. ಎನ್​ಪಿಎಸ್​ ಯೋಜನೆಗೆ ಯಾವುದೇ ನೌಕರರು ಸ್ವಯಂಪ್ರೇರಿತವಾಗಿ ಸೇರಬಹುದಾಗಿದ್ದು, ಸಾರ್ವಜನಿಕ ವಲಯದ ಸಂಸ್ಥೆಗಳು, ಖಾಸಗಿ ಲಿಮಿಟೆಡ್ ಕಂಪನಿಗಳು ಅಥವಾ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಕೆಲಸ ಮಾಡುವವರು ಈ ಯೋಜನೆಯ ಚಂದಾದಾರರಾಗಬಹುದು.

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಡಿ ನಿರ್ವಹಿಸಲ್ಪಡುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ವೇತನದ ಕೊಡುಗೆ ಆಧಾರದ ಮೇಲೆ ಜಾರಿಗೆ ತರಲಾಗುತ್ತಿದೆ. ಚಂದಾದಾರರು ಮತ್ತು ಉದ್ಯೋಗದಾತ ಇಬ್ಬರೂ ಪಿಂಚಣಿ ಖಾತೆಗೆ ಸಮಾನ ಮೊತ್ತವನ್ನು ಕೊಡುಗೆ ನೀಡುತ್ತಾರೆ. ಜನವರಿ 1, 2004 ರಿಂದ ಸಶಸ್ತ್ರ ಪಡೆಗಳನ್ನು ಹೊರತುಪಡಿಸಿ ಎಲ್ಲ ಹೊಸ ಕೇಂದ್ರ ಸರ್ಕಾರಿ ನೌಕರರಿಗೆ ಇದನ್ನು ಕಡ್ಡಾಯಗೊಳಿಸಲಾಗಿದೆ.

ಹಳೆಯ ಪಿಂಚಣಿ ಯೋಜನೆ ಸೇರಲು ಒಂದು ಬಾರಿಯ ಅವಕಾಶ ನೀಡಿದ ಉತ್ತರ ಪ್ರದೇಶ ಸರ್ಕಾರ: ತನ್ನ ರಾಜ್ಯದ ಸರ್ಕಾರಿ ನೌಕರರು ಎನ್​ಪಿಎಸ್​ ಬದಲಿಗೆ ಹಳೆಯ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದಾದ ಒಂದು ಬಾರಿಯ ಯೋಜನೆಯನ್ನು ಉತ್ತರ ಪ್ರದೇಶ ಸರ್ಕಾರ ಜಾರಿಗೊಳಿಸಿದೆ. ರಾಜ್ಯ ಸರ್ಕಾರಿ ನೌಕರರು, ಸರ್ಕಾರದಿಂದ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ರಾಜ್ಯ ಸರ್ಕಾರದಿಂದ ಧನಸಹಾಯ ಪಡೆದ ಸ್ವಾಯತ್ತ ಸಂಸ್ಥೆಗಳು, ನೌಕರರ ಪಿಂಚಣಿ ಯೋಜನೆ ಜಾರಿಯಲ್ಲಿದ್ದ ಮತ್ತು ರಾಜ್ಯ ಸರ್ಕಾರದ ಸಂಚಿತ ನಿಧಿಯಿಂದ ಹಣಕಾಸು ಒದಗಿಸಿದವರಿಗೆ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಆಯ್ಕೆ ಮಾಡಲು ಒಂದು ಬಾರಿಯ ಆಯ್ಕೆಯನ್ನು ನೀಡಲು ರಾಜ್ಯ ಸಚಿವ ಸಂಪುಟ ಮಂಗಳವಾರ ನಿರ್ಧರಿಸಿದೆ ಎಂದು ಸಂಸದೀಯ ವ್ಯವಹಾರಗಳು ಮತ್ತು ಹಣಕಾಸು ಸಚಿವ ಸುರೇಶ್ ಖನ್ನಾ ಹೇಳಿದರು

ಇದನ್ನೂ ಓದಿ : ಮದುವೆ ಖರ್ಚು ನಮ್ಮಲ್ಲೇ ಹೆಚ್ಚು!: ಭಾರತೀಯ ವಿವಾಹ ಮಾರುಕಟ್ಟೆ ಎಷ್ಟು ಬಿಲಿಯನ್​ $​ ವೆಚ್ಚದ್ದು ಗೊತ್ತಾ? - Weddings In India

ABOUT THE AUTHOR

...view details