ನವದೆಹಲಿ/ನೋಯ್ಡಾ: ಇಲ್ಲಿನ ಸೆಕ್ಟರ್-59 ಮೆಟ್ರೋ ನಿಲ್ದಾಣದ ಕೆಳಗಿನ ತಿರುವಿನಲ್ಲಿ ಕಾರೊಂದಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅದರಲ್ಲಿದ್ದ ಚಾಲಕ ಸಾವನ್ನಪ್ಪಿದ್ದಾನೆ. ಈ ಘಟನೆ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕಾರಿನಲ್ಲಿದ್ದ ಯುವಕನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಕಾರಿನೊಳಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಅಪಘಾತದ ನಂತರ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸದ್ಯ ಪೊಲೀಸರು ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಘಟನೆ ಬಗ್ಗೆ ಪೊಲೀಸರು ಹೇಳುವುದಿಷ್ಟು: ’’ಜೆಎಂ ಅರೋಮಾ ಸೊಸೈಟಿ, ಸೆಕ್ಟರ್ -75 ರ ನಿವಾಸಿ 30 ವರ್ಷದ ಸಾಹಿತ್ ಎಂಬುವವರೇ ಈ ಘಟನೆಯಲ್ಲಿ ಮೃತಪಟ್ಟ ಯುವಕ. ಸಾಹಿತ್ ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಟೊಯೊಟಾ ಕೊರೊಲ್ಲಾ ಆಲ್ಟಿಸ್ ಕಾರಿನಲ್ಲಿ ಗಾಜಿಯಾಬಾದ್‌ನಿಂದ ಮನೆಗೆ ಮರಳುತ್ತಿದ್ದರು. ಸೆಕ್ಟರ್-59 ಮೆಟ್ರೋ ನಿಲ್ದಾಣದ ಬಳಿ ವೇಗವಾಗಿ ಬಂದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಇದಾದ ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಚಾಲಕ ಒಳಗೇ ಸಿಕ್ಕಿಬಿದ್ದಿದ್ದಾನೆ. ಕೆಲವೇ ನಿಮಿಷಗಳಲ್ಲಿ ಇಡೀ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕಾರಿನ ಬಾಗಿಲು ಸಡನ್ ಆಗಿ ಲಾಕ್ ಆಗಿದ್ದರಿಂದ ಸಾಹಿತ್ ಕಾರಿನೊಳಗೆ ಸಜೀವ ದಹನವಾಗಿದ್ದಾನೆ‘‘ ಎಂದು ಹೆಚ್ಚುವರಿ ಡಿಸಿಪಿ ಹೃದೇಶ್ ಕಥೇರಿಯಾ ಹೇಳಿದ್ದಾರೆ.