ಮೊಹಾಲಿ (ಪಂಜಾಬ್) :ಅಕ್ರಮವಾಗಿ ನೆಲೆಸಿರುವ ಭಾರತೀಯರು ಸೇರಿದಂತೆ ವಿಶ್ವದ ಎಲ್ಲ ರಾಷ್ಟ್ರಗಳ ವಲಸಿಗರನ್ನು ಅಮೆರಿಕ ತನ್ನ ದೇಶದಿಂದ ಹೊರಹಾಕುತ್ತಿದೆ. ಈಗಾಗಲೇ ಭಾರತಕ್ಕೆ 200ಕ್ಕೂ ಹೆಚ್ಚು ಜನರನ್ನು ಅಲ್ಲಿನ ಸೇನಾಪಡೆಗಳು ವಾಪಸ್ ಕರೆತಂದು ಬಿಟ್ಟಿವೆ. ಈ ಮಧ್ಯೆ ಕೆನಡಾದ ಮೂಲಕ ಅಮೆರಿಕಕ್ಕೆ ಅಕ್ರಮವಾಗಿ ಹೊರಟಿದ್ದ ಭಾರತೀಯ ಯುವಕನೊಬ್ಬ ಕಾಂಬೋಡಿಯಾದಲ್ಲಿ ಮೃತಪಟ್ಟಿದ್ದಾನೆ.
ಪಂಜಾಬ್ನ ಮೊಹಾಲಿಯ ಗ್ರಾಮವೊಂದರ 24 ವರ್ಷದ ರಣದೀಪ್ ಸಿಂಗ್ ಮೃತ ಯುವಕ. ಕಾಂಬೋಡಿಯಾದಲ್ಲಿ ಆತ ಕಳೆದ 8 ತಿಂಗಳಿನಿಂದ ಸಿಕ್ಕಿಬಿದ್ದಿದ್ದು, ಅನಾರೋಗ್ಯಕ್ಕೀಡಾಗಿ ಅಲ್ಲಿಯೇ ಸಾವಿಗೀಡಾಗಿದ್ದಾನೆ. ಶವವನ್ನು ಭಾರತಕ್ಕೆ ತರಲು ನೆರವು ನೀಡಬೇಕು ಎಂದು ಕುಟುಂಬಸ್ಥರು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.
₹43 ಲಕ್ಷ ವ್ಯಯಿಸಿ ಅಮೆರಿಕಕ್ಕೆ :ಕುಟುಂಬಸ್ಥರು ನೀಡಿದ ಮಾಹಿತಿಯ ಪ್ರಕಾರ, ರಣದೀಪ್ ಸಿಂಗ್ ಅಮೆರಿಕಕ್ಕೆ ತೆರಳುವ ಯಾವುದೇ ಅರ್ಹತೆ ಹೊಂದಿರಲಿಲ್ಲ. ಏಜೆಂಟರ ಸಹಾಯದಿಂದ ಅಮೆರಿಕಕ್ಕೆ ತೆರಳಲು ಪ್ರಯತ್ನಿಸಿದ್ದ. ಅನ್ಯ ಮಾರ್ಗದಿಂದ ಆತನನ್ನು ಕರೆದೊಯ್ಯಲು ಏಜೆಂಟ್ ಭರವಸೆ ನೀಡಿದ್ದ. ಇದಕ್ಕಾಗಿ 43 ಲಕ್ಷ ರೂಪಾಯಿ ನೀಡಿದ್ದ. ಮೊದಲು 50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿದ್ದಾರೆ.
ರಣದೀಪ್ ಕುಟುಂಬದಲ್ಲಿಯೇ ಕಿರಿಯ ಪುತ್ರ. 10ನೇ ತರಗತಿ ಅಭ್ಯಾಸ ಮಾಡಿರುವ ಈತ, ಅಮೆರಿಕದಲ್ಲಿ ದುಡಿಮೆ ಮಾಡಲು ಬಯಸಿದ್ದ. ಏಜೆಂಟರು ಕೇಳಿದಷ್ಟು ಹಣ ನೀಡಿ, 2024ರ ಜೂನ್ 1 ರಂದು ಆತ ಅಮೆರಿಕಕ್ಕೆ ತೆರಳಿದ್ದ. ಆದರೆ, ಅಲ್ಲಿಗೆ ನೇರವಾಗಿ ತೆರಳಲು ಸಾಧ್ಯವಿರಲಿಲ್ಲ. ಜೊತೆಗೆ, ಡೊನಾಲ್ಡ್ ಟ್ರಂಪ್ ಸರ್ಕಾರ ಅಕ್ರಮ ನಿವಾಸಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಹೀಗಾಗಿ ಗಡಿಯಾಚೆ ಸಿಲುಕಿದ್ದರು ಎಂದಿದ್ದಾರೆ.
ಶವ ತಾಯ್ನಾಡಿಗೆ ತನ್ನಿ :ಬಳಿಕ ಏಜೆಂಟರು ಆತನನ್ನು ವಾಪಸ್ ಭಾರತಕ್ಕೆ ಕರೆದು ತಾರದೆ, ಅಮೆರಿಕಕ್ಕೂ ಕಳುಹಿಸಲಿಲ್ಲ. ಇದಕ್ಕೂ ಮೊದಲು ಆತನನ್ನು 8 ತಿಂಗಳು ಕಾಲ ವಿಯೆಟ್ನಾಂ ಮತ್ತು ಕಾಂಬೋಡಿಯಾದಲ್ಲಿ ಇರಿಸಲಾಗಿತ್ತು. ಈ ವೇಳೆ, ಅನಾರೋಗ್ಯಕ್ಕೆ ಒಳಗಾಗಿದ್ದ. ಸೂಕ್ತ ಚಿಕಿತ್ಸೆ ಸಿಗದ ಕಾರಣ ಆತ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ರಣದೀಪ್ನ ಪಾಸ್ಪೋರ್ಟ್ ಅನ್ನು ಏಜೆಂಟ್ ಕಿತ್ತುಕೊಂಡಿದ್ದರಿಂದ ಆತ ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ. ಇದರಿಂದ ಏಜೆಂಟರ ವಿರುದ್ಧ ಕ್ರಮ ಜರುಗಿಸಬೇಕು. ಆತನ ಪಾರ್ಥಿವ ಶರೀರವನ್ನು ಭಾರತಕ್ಕೆ ತರಬೇಕು ಎಂದು ಪಂಜಾಬ್ನ ಆಪ್ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಶ್ರೀಲಂಕಾ ನೌಕಾಪಡೆಯಿಂದ 32 ತಮಿಳು ಮೀನುಗಾರರ ಬಂಧನ, 5 ದುಬಾರಿ ಬೋಟ್ ವಶಕ್ಕೆ