ಧರ್ಮಶಾಲಾ(ಹಿಮಾಚಲ ಪ್ರದೇಶ):'ಚಂದ್ರ ಮುರಿದು ಬಿದ್ದ ತಾಣ' ಎಂದು ಬಣ್ಣಿಸಲಾಗುವ ಲಡಾಖ್ ಪ್ರವಾಸಿಗರ ಸ್ವರ್ಗ. ದೇಶದ ಉದ್ದಗಲದಿಂದ ಜನರು ಬೈಕ್ ರೈಡ್ ಮೂಲಕ ಇಲ್ಲಿಗೆ ಬರುತ್ತಾರೆ. ಹಿಮಾಲಯದ ಗಿರಿ ಶಿಖರಗಳಿಂದ ಕೂಡಿದ ವಿಶ್ವದ ಅತೀ ಎತ್ತರದ ಪ್ರಸ್ಥಭೂಮಿಗೆ ಇದೀಗ ಬಸ್ ಸಂಚಾರವೂ ಆರಂಭವಾಗಿದೆ.
ಹಿಮಾಚಲ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯು (ಹೆಚ್ಆರ್ಟಿಸಿ) ಈ ಸೇವೆಯನ್ನು ಆರಂಭಿಸಿದೆ. ವಿಶ್ವದ ಎತ್ತರದ ಪ್ರದೇಶ ಲೇಹ್‌ಗೆ ದೆಹಲಿಯಿಂದ ಮನಾಲಿ ಮೂಲಕ ಬಸ್ ಸಂಚರಿಸಲಿದೆ. ಜೂನ್ 11ರಿಂದ ಇದು ಆರಂಭವಾಗಿದೆ. ಎರಡೂ ಪ್ರದೇಶಗಳ ನಡುವಿನ ದೂರ 981 ಕಿ.ಮೀ. ಆಗಿದೆ. ಸುಮಾರು 33 ತಾಸು ಪ್ರಯಾಣಕ್ಕೆ ತಗಲುವ ಸಮಯ. ಇಂದು ಪ್ರವಾಸಿಗರನ್ನು ಹೊತ್ತ ಮೊದಲ ಬಸ್ ಸಂಚಾರ ಶುರು ಮಾಡಿತು.
ಪ್ರಯಾಣ ದರದ ಮಾಹಿತಿ:ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಹೆಚ್ಆರ್ಟಿಸಿ ಅಧಿಕಾರಿಗಳು, ದೆಹಲಿಯಿಂದ ಮನಾಲಿ ಮೂಲಕ ಲೇಹ್‌ಗೆ ಬಸ್ ಸಂಚಾರ ಇರಲಿದೆ. ಇದು ದೇಶದ ನಾಲ್ಕು ದೊಡ್ಡ ಪಾಸ್‌ಗಳ (ಟನಲ್) ಮೂಲಕ ಸಾಗುತ್ತದೆ. ಬರಾಲಾಚಾ ಪಾಸ್ (16,020 ಅಡಿ), ನಕಿಲ್ಲಾ ಪಾಸ್, ಲಾಚುಂಗ್ಲಾ ಪಾಸ್ (16,620 ಅಡಿ) ಮತ್ತು ತಂಗ್ಲಾಂಗ್ಲಾ ಪಾಸ್ (17,480 ಅಡಿ) ದಾಟಿ ಹಿಮಾಚಲದ ಮೂಲಕ ಲಡಾಖ್ ತಲುಪಲಿದೆ. ಈ ಅದ್ಭುತ ಪ್ರಯಾಣಕ್ಕಾಗಿ ಪ್ರವಾಸಿಗರು ಕೇವಲ 1,627 ರೂಪಾಯಿ ಪಾವತಿಸಬೇಕಾಗುತ್ತದೆ. ದೆಹಲಿಯಿಂದ ಲೇಹ್ವರೆಗಿನ ಮಾರ್ಗದಲ್ಲಿ ಪ್ರಯಾಣವನ್ನು ಆನಂದಿಸಬಹುದು ಎಂದರು.