ನವದೆಹಲಿ:ಲೋಕಸಭೆ ಚುನಾವಣೆ ಮುಗಿಯುವವರೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ (ಐಎನ್‌ಸಿ) 3,500 ಕೋಟಿ ರೂಪಾಯಿ ವಸೂಲಿ ಮಾಡಲು ಆದಾಯ ತೆರಿಗೆ ಇಲಾಖೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಕ್ಕೆ ಯಾವುದೇ ತೊಂದರೆಯಾಗದಂತೆ ಇಲಾಖೆ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಮೆಹ್ತಾ ಒತ್ತಿ ಹೇಳಿದರು.
ನ್ಯಾಯಮೂರ್ತಿ ಬಿ. ವಿ. ನಾಗರತ್ನ ನೇತೃತ್ವದ ಪೀಠವು ಆದಾಯ ತೆರಿಗೆ ಇಲಾಖೆಯಿಂದ 3,500 ಕೋಟಿ ರೂಪಾಯಿಗಳ ಡಿಮ್ಯಾಂಡ್ ನೋಟಿಸ್ ವಿರುದ್ಧ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಲ್ಲಿಸಿದ ಅರ್ಜಿಯ ಕುರಿತು ವಿಚಾರಣೆ ನಡೆಸಿತು.
ಆದಾಯ ತೆರಿಗೆ ಇಲಾಖೆ ಪ್ರತಿನಿಧಿಸಿದ ಮೆಹ್ತಾ ಅವರು, ''ಅಂದಾಜು 3,500 ಕೋಟಿ ರೂ.ಗಳ ಬೇಡಿಕೆ ಇದೆ. ಮತ್ತು ಚುನಾವಣೆ ಮುಗಿಯುವವರೆಗೆ ಆದಾಯ ಇಲಾಖೆಯು ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ'' ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಎ.ಎಂ. ಸಿಂಘ್ವಿ ಅವರು, ನ್ಯಾಯಾಲಯವು ಮೆಹ್ತಾ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು'' ಎಂದು ಹೇಳಿದರು.