ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ವತಿಯಿಂದ ಸರ್ಕಾರಿ ಕೋಟಾದಡಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ನಡೆಸುವ ಸೀಟು ಹಂಚಿಕೆ ಹಗರಣದಲ್ಲಿ ಶಾಮೀಲಾದ ಆರೋಪದಡಿ, ಪ್ರಕರಣ ದಾಖಲಿಸಿಕೊಂಡಿದ್ದ ಮಲ್ಲೇಶ್ವರಂ ಠಾಣೆ ಪೊಲೀಸರು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.
ಕೆಇಎ ಆಡಳಿತಾಧಿಕಾರಿ ಇಸಾಲುದ್ದೀನ್ ಜೆ. ಗಾಡಿಯಲ್ ನೀಡಿದ ದೂರಿನ ಮೇರೆಗೆ ನಗರದ ಬಿಎಂಎಸ್ ಕಾಲೇಜು, ಆಕಾಶ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜು ಹಾಗೂ ನ್ಯೂ ಹಾರಿಜನ್ ಇಂಜಿನಿಯರಿಂಗ್ ಕಾಲೇಜುಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಪೊಲೀಸರು, 10 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.
ಏನಿದು ಹಗರಣ?: ಸರ್ಕಾರ ಸೀಟು ಹಂಚಿಕೆ ವಿಚಾರದಲ್ಲಿ ಖಾಸಗಿ ಕಾಲೇಜುಗಳ ಒಕ್ಕೂಟದೊಂದಿಗಿನ ಒಪ್ಪಂದದಂತೆ ನಿಗದಿಪಡಿಸಿದ ಕಾಲೇಜುಗಳಿಗೆ ಸೇರ್ಪಡೆಯಾಗದ 2,625 ಅಭ್ಯರ್ಥಿಗಳು ಸೂಕ್ತ ಕಾರಣ ನೀಡುವಂತೆ ಕೆಇಎ ನೋಟಿಸ್ ಜಾರಿ ಮಾಡಿತ್ತು. ಅಭ್ಯರ್ಥಿಗಳು ಕಾಲೇಜು ಪ್ರವೇಶ ಪಡೆಯದ್ದರಿಂದ ಮುಂದಿನ ಅರ್ಹ ಅಭ್ಯರ್ಥಿಗಳಿಗೆ ಉದ್ದೇಶಪೂರ್ವಕವಾಗಿ ವಂಚಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ ಸರ್ಕಾರಿ ಸೀಟುಗಳ ಬದಲಿಗೆ ಮ್ಯಾನೇಜ್ಮೆಂಟ್ ಕೋಟಾದ ಸೀಟುಗಳಾಗಿ ಪರಿವರ್ತಿಸಿ, ಖಾಸಗಿ ಕಾಲೇಜುಗಳು ಅಭ್ಯರ್ಥಿಗಳಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದವು ಎಂಬ ಆಪಾದನೆ ಬಂದಿತ್ತು. ಸೀಟು ಅಗತ್ಯವಿಲ್ಲದ ಅಭ್ಯರ್ಥಿಗಳನ್ನು ಸಂಪರ್ಕಿಸಿ ಕೌನ್ಸೆಲಿಂಗ್ನಲ್ಲಿ ಭಾಗಿಯಾಗುವಂತೆ ಮಾಡಿಸಿ, ಉದ್ದೇಶಪೂರ್ವಕವಾಗಿ ಅರ್ಹ ಅಭ್ಯರ್ಥಿಗಳಿಗೆ ಸೀಟು ಸಿಗದಂತೆ ಆರೋಪಿಗಳು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪಿಜಿ ವೈದ್ಯಕೀಯ ಕೋರ್ಸ್ ಗಳ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ