ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಎಸ್ಎಸ್ಎಲ್ಸಿ ಹಾಗು ಪಿಯುಸಿ ಪರೀಕ್ಷೆಯ ಮಾರ್ಚ್/ಏಪ್ರಿಲ್ 2025ನೇ ಸಾಲಿನ ತಾತ್ಕಾಲಿಕ ವೇಳಾಪಟ್ಟಿಯನ್ನು ಇಂದು ಪ್ರಕಟಿಸಿದೆ.
ಎಸ್ಎಸ್ಎಲ್ಸಿ ಪರೀಕ್ಷೆ ಮಾರ್ಚ್ 20ರಿಂದ ಏಪ್ರಿಲ್ 2ರವರೆಗೆ ನಡೆಯಲಿದೆ. ಪಿಯುಸಿ ಪರೀಕ್ಷೆ ಮಾರ್ಚ್ 1ರಿಂದ 19ರವರೆಗೆ ನಡೆಯಲಿದೆ.
ಎಸ್ಎಸ್ಎಲ್ಸಿ ಪರೀಕ್ಷೆ ವೇಳಾಪಟ್ಟಿ ಸಂಬಂಧ 3/4/2025 (ಗುರುವಾರ)ರಂದು ಜೆ.ಟಿ.ಎಸ್ (56, 57, 58 & 59 ವಿಷಯಗಳು) ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಹಾಗೂ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಡೆಸಲಾಗುತ್ತದೆ.
ಹಿಂದೂಸ್ತಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ವಿಷಯದ ಪರೀಕ್ಷೆಯನ್ನು ಮಧ್ಯಾಹ್ನ 2 ಗಂಟೆಯಿಂದ ಸಾಯಂಕಾಲ 5.15 ರವರೆಗೆ ನಿಗದಿಪಡಿಸಲಾಗಿದೆ. ಈ ವಿಷಯಗಳ ತಾತ್ವಿಕ ಪರೀಕ್ಷೆಯನ್ನು ಮಧ್ಯಾಹ್ನ 2 ಗಂಟೆಯಿಂದ ಮಧ್ಯಾಹ್ನ 3.45 ಗಂಟೆಯವರೆಗೆ ಮತ್ತು ಪ್ರಾಯೋಗಿಕ ಪರೀಕ್ಷೆಯನ್ನು ಮಧ್ಯಾಹ್ನ 3.45ರಿಂದ ಸಾಯಂಕಾಲ 5.15 ಗಂಟೆಯವರೆಗೆ ನಡೆಸಲಾಗುತ್ತದೆ.
ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಮೂರು ಗಂಟೆಯ ಪ್ರಶ್ನೆಪತ್ರಿಕೆಗೆ ಉತ್ತರಿಸಲು ಹೆಚ್ಚುವರಿಯಾಗಿ 60 ನಿಮಿಷಗಳು, ಎರಡೂವರೆ ಗಂಟೆಯ ಪ್ರಶ್ನೆಪತ್ರಿಕೆಗೆ 50 ನಿಮಿಷಗಳು, ಎರಡು ಗಂಟೆಯ ಪ್ರಶ್ನೆಪತ್ರಿಕೆಗೆ 40 ನಿಮಿಷಗಳು, ಒಂದೂವರೆ ಗಂಟೆಯ ಪ್ರಶ್ನೆಪತ್ರಿಕೆಗೆ 30 ನಿಮಿಷಗಳನ್ನು ನೀಡಲಾಗುತ್ತದೆ.
ಪ್ರಥಮ ಭಾಷಾ ವಿಷಯಗಳು, ಕೋರ್ ವಿಷಯಗಳು ಮತ್ತು ಜೆ.ಟಿ.ಎಸ್ ವಿಷಯಗಳಿಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ಮತ್ತು ದ್ವಿತೀಯ ಭಾಷಾ ವಿಷಯಗಳು ಹಾಗೂ ತೃತೀಯ ಭಾಷಾ ವಿಷಯಗಳಿಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ನಿಗದಿ ಮಾಡಲಾಗಿದೆ.
ಎನ್.ಎಸ್.ಕ್ಯೂ.ಎಫ್ ವಿಷಯಗಳ ಪರೀಕ್ಷೆ ಬೆಳಗ್ಗೆ 10ರಿಂದ 12.15ರವರೆಗೆ ನಡೆಯಲಿದೆ. ಎನ್.ಎಸ್.ಕ್ಯೂ.ಎಫ್, ಪರೀಕ್ಷಾ ವಿಷಯಗಳ ಪರೀಕ್ಷೆ ಬರೆಯಲು 2 ಗಂಟೆ ಹಾಗೂ ಪ್ರಶ್ನೆಪತ್ರಿಕೆ ಓದಲು 15 ನಿಮಿಷ ನಿಗದಿಪಡಿಸಲಾಗಿದೆ.
ಎಲ್ಲಾ ಶಾಲಾ, ಕಾಲೇಜುಗಳು ವೇಳಾಪಟ್ಟಿಯ ಮಾಹಿತಿಯನ್ನು ಮಕ್ಕಳಿಗೆ ನೀಡಬೇಕೆಂದು ಸೂಚಿಸಲಾಗಿದೆ. ತಾತ್ಕಾಲಿಕ ವೇಳಾಪಟ್ಟಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಡಿ.2ರಿಂದ 16ರವರೆಗೆ ಕಾಲಾವಕಾಶ ನೀಡಿದೆ.
ಇದನ್ನೂ ಓದಿ: SSLC ಅರ್ಧವಾರ್ಷಿಕ ಪರೀಕ್ಷೆಗೆ ಟೈಂ ಕಡಿತ ಇಲ್ಲ: 15 ನಿಮಿಷ ಹೆಚ್ಚುವರಿ ಸಮಯ ಮುಂದುವರಿಕೆ - SSLC Midterm Exam