ದಾವಣಗೆರೆ: ಆಸ್ತಿಗಾಗಿ ಸಂಚು ರೂಪಿಸಿ ತನ್ನ ಚಿಕ್ಕಪ್ಪನನ್ನೇ ಅಣ್ಣನ ಮಗ ಕೊಲೆ ಮಾಡಿಸಿದ್ದು, ಸುಪಾರಿ ಪಡೆದು ಹತ್ಯೆಗೈದ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಚನ್ನಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ತಾಲೂಕು ಗೋಪನಾಳ್ ಗ್ರಾಮದ ಸಿದ್ದಲಿಂಗಪ್ಪ ಕೊಲೆಯಾದವರು. ಕೊಲೆಗೆ ಸಂಚು ರೂಪಿಸಿದ್ದ ಆರೋಪಿಗಳಾದ ಸತೀಶ್ (ಅಣ್ಣನ ಮಗ), ಸುಜಾತ, ಶಿವಮೂರ್ತೆಪ್ಪ, ಕೊಲೆಗೈದ ಪ್ರಭು ಅಲಿಯಾಸ್ ಮಾಸ್ತಿ ಹಾಗೂ ಪ್ರಶಾಂತ್ ನಾಯ್ಕ ಎಂಬವರನ್ನು ಬಂಧಿಸಲಾಗಿದೆ.
ಘಟನೆಯ ಹಿನ್ನೆಲೆ: ನಲ್ಲೂರು ಭದ್ರಾ ಉಪ ನಾಲೆಯಲ್ಲಿ ನವೆಂಬರ್ 22ರಂದು ಅನುಮಾನಾಸ್ಪದವಾಗಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಮೃತದೇಹವನ್ನು ಗೋಪನಾಳ್ ಗ್ರಾಮದ ನಿವಾಸಿ ಸಿದ್ದಲಿಂಗಪ್ಪ (55) ಎಂದು ಮೃತನ ಸೊಸೆ ದೊಡ್ಡಮ್ಮ ಗುರುತಿಸಿದ್ದರು. ಸಿದ್ದಲಿಂಗಪ್ಪನ ಕೊಲೆಯಾಗಿದೆ ಎಂದು ಅನುಮಾನ ವ್ಯಕ್ತಪಡಿಸಿ ದೊಡ್ಡಮ್ಮ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆಸ್ತಿಗಾಗಿ ಸುಪಾರಿ: ಆಸ್ತಿ ವಿಚಾರಕ್ಕಾಗಿ ಸಿದ್ದಲಿಂಗಪ್ಪನ ಕೊಲೆ ಮಾಡಲು ಅವರ ಅಣ್ಣ ಶಿವಮೂರ್ತೆಪ್ಪ, ಶಿವಮೂರ್ತೆಪ್ಪನ ಪುತ್ರ ಸತೀಶ್, ಸತೀಶನ ಪತ್ನಿ ಸುಜಾತ ಸಂಚು ರೂಪಿಸಿದ್ದರು. ಆರೋಪಿಗಳಾದ ಪ್ರಭು ಅಲಿಯಾಸ್ ಮಾಸ್ತಿ ಹಾಗೂ ಪ್ರಶಾಂತ್ ನಾಯ್ಕ ಅಲಿಯಾಸ್ ಪಿಲ್ಲಿ ಸಿದ್ದಲಿಂಗಪ್ಪನ ಕೊಲೆಗೆ 1 ಲಕ್ಷ ರೂ. ಸುಪಾರಿ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಮಾಡಿದ್ದೇಗೆ?: ನವೆಂಬರ್ 21ರಂದು ಸಂಜೆ ಆರೋಪಿಗಳು, ಬೋರ್ ಪಾಯಿಂಟ್ ಮಾಡಿಸಬೇಕಾಗಿದೆ ಎಂದು ತೊಗಲೇರಿ ಕ್ರಾಸ್ನಿಂದ ಆಟೋದಲ್ಲಿ ಚನ್ನಗಿರಿಯ ಹೊನ್ನೆಬಾಗಿ ಸಮೀಪದ ನಿರ್ಜನ ಪ್ರದೇಶಕ್ಕೆ ಸಿದ್ದಲಿಂಗಪ್ಪನನ್ನು ಕರೆದುಕೊಂಡು ಹೋಗಿದ್ದಾರೆ. ಪೂರ್ವ ನಿಯೋಜನೆಯಂತೆ ಸಿದ್ದಲಿಂಗಪ್ಪನನ್ನು ಟವೆಲ್ನಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ನಲ್ಲೂರು ಸಮೀಪದ ಭದ್ರಾ ಉಪ ನಾಲೆ ಬಳಿ ತಂದು, ಕಲ್ಲು ಕಟ್ಟಿ ನೀರಿಗೆ ಹಾಕಿದ್ದರು. ವಿಚಾರಣೆ ವೇಳೆ ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಯುವತಿ ಕೊಲೆ ಬಳಿಕ ಆತ್ಮಹತ್ಯೆಗೆ ವಿಫಲಯತ್ನ; ಹಣವಿಲ್ಲದೆ ಪೊಲೀಸರ ಅತಿಥಿಯಾದ ಆರೋಪಿ!