ಕೋಲ್ಕತಾ: ಸಂದೇಶ್‌ಖಾಲಿ ಬ್ಲಾಕ್ ಸೇರಿದಂತೆ ಏಳು ಗ್ರಾಮ ಪಂಚಾಯಿತಿಗಳ ಸುತ್ತಮುತ್ತಲಿನ ಸುಮಾರು 500 ಮೀಟರ್ ಪ್ರದೇಶದಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಮತ್ತೆ 144ನೇ ಕಲಂ ಅನ್ನು ಜಾರಿ ಮಾಡಿದೆ. ಸಂದೇಶ್ ಖಾಲಿ ಬ್ಲಾಕ್ನಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಿವೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಫೆಬ್ರವರಿ 19ರವರೆಗೆ ಈ ಪ್ರದೇಶದಲ್ಲಿ ಸೆಕ್ಷನ್ 144 ವಿಧಿಸಲಾಗಿದೆ.
ಇದಕ್ಕೂ ಮೊದಲು, ಸೆಕ್ಷನ್ 144 (ಸಿಆರ್‌ಪಿಸಿ) ಅಡಿಯಲ್ಲಿ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಕೋಲ್ಕತ್ತಾ ಹೈಕೋರ್ಟ್ ಮಂಗಳವಾರ ತೆಗೆದುಹಾಕಿತ್ತು. ಸಂದೇಶ್‌ಖಾಲಿಯಲ್ಲಿ ನಡೆಯುತ್ತಿರುವ ಘಟನಾವಳಿಗಳಿಂದ ರಾಜ್ಯದ ಬೇರೆ ಕಡೆಗಳಲ್ಲೂ ಹಿಂಸಾಚಾರದ ಘಟನೆಗಳು ನಡೆಯುತ್ತಿವೆ.
ಸಂದೇಶ್‌ಖಾಲಿ ಬ್ಲಾಕ್ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ ಬಿಜೆಪಿ ಎಸ್ಪಿ ಕಚೇರಿ ಮುತ್ತಿಗೆ ಹಾಕಲು ಪ್ರಯತ್ನಿಸಿತ್ತು. ಎಸ್ಪಿ ಕಚೇರಿ ಸುತ್ತಮುತ್ತ ವಿಧಿಸಲಾದ ನಿಷೇಧಾಜ್ಞೆಯನ್ನು ಲೆಕ್ಕಿಸದೆ ಮಂಗಳವಾರ ಕಚೇರಿಯ ಮುತ್ತಿಗೆಗೆ ಯತ್ನಿಸಿದ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ನಡೆಯಿತು.
ಪ್ರತಿಭಟನೆಗೆ ಅವಕಾಶ ನೀಡದ ಪೊಲೀಸರ ಕ್ರಮ ಖಂಡಿಸಿ ಪಕ್ಷದ ರಾಜ್ಯ ಮುಖ್ಯಸ್ಥ ಸುಕಾಂತ ಮಜುಂದಾರ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬಸೀರ್ಹಾಟ್ನಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು.
ಬ್ಯಾರಿಕೇಡ್ಗಳನ್ನು ಮುರಿದು ಗ್ರಾಮದೊಳಗೆ ಪ್ರವೇಶಿಸಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರಿಂದ ಗ್ರಾಮದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇದರ ನಂತರ ಸುಕಾಂತ ಮಜುಂದಾರ್ ಸೇರಿದಂತೆ ಹಲವಾರು ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.
ಟಿಎಂಸಿ ನಾಯಕ ಶಹಜಹಾನ್ ಶೇಖ್, ಸಹಚರರ ವಿರುದ್ಧ ಗಂಭೀರ ಆರೋಪ: ಟಿಎಂಸಿ ನಾಯಕ ಶಹಜಹಾನ್ ಶೇಖ್ ಮತ್ತು ಆತನ ಸಹಚರರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಸಂದೇಶ್ ಖಾಲಿಯಲ್ಲಿ ಮಹಿಳೆಯರು ಕಳೆದ ಕೆಲ ದಿನಗಳಿಂದ ದೊಣ್ಣೆ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.
"ಸಂದೇಶ್‌ಖಾಲಿಯಲ್ಲಿ ಟಿಎಂಸಿ ಕಾರ್ಯಕರ್ತರು ಹಲವಾರು ತಿಂಗಳುಗಳಿಂದ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ. ಶೇಖ್ ಶಹಜಹಾನ್, ಶಿಬು ಹಜ್ರಾ ಮತ್ತು ಉತ್ತಮ್ ಸರ್ದಾರ್ ಎಂಬವರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ. ಅವರನ್ನು ಬಂಧಿಸದಿದ್ದರೆ ಸಂದೇಶ್‌ಖಾಲಿಯ ಮಹಿಳೆಯರು ನೆಮ್ಮದಿಯಿಂದ ಇರಲು ಹೇಗೆ ಸಾಧ್ಯ" ಎಂದು ಮಜುಂದಾರ್ ಪ್ರಶ್ನಿಸಿದರು.
ಇದಕ್ಕೂ ಮುನ್ನ, ಸ್ಥಳೀಯರು, ವಿಶೇಷವಾಗಿ ಮಹಿಳೆಯರು ಕೈಯಲ್ಲಿ ಚಪ್ಪಲಿ, ದೊಣ್ಣೆಗಳನ್ನು ಹಿಡಿದುಕೊಂಡು ಸಂದೇಶ್‌ಖಾಲಿಯ ವಿವಿಧ ಪ್ರದೇಶಗಳ ಮೂಲಕ ಮೆರವಣಿಗೆ ನಡೆಸಿ, ಭೂ ಪಡಿತರ ಹಂಚಿಕೆ ಹಗರಣ ಮತ್ತು ಅತ್ಯಾಚಾರ ಘಟನೆಗಳಲ್ಲಿ ಟಿಎಂಸಿ ನಾಯಕ ಶಹಜಹಾನ್ ಶೇಖ್‌ನನ್ನು ಬಂಧಿಸುವಂತೆ ಒತ್ತಾಯಿಸಿದರು.
ಇದನ್ನೂ ಓದಿ: ಒನ್ ನೇಷನ್ ಒನ್ ಎಲೆಕ್ಷನ್, ಡಿಲಿಮಿಟೇಶನ್ ವಿರುದ್ಧ ನಿರ್ಣಯ ಮಂಡಿಸಿದ ಸಿಎಂ ಸ್ಟಾಲಿನ್