ನವದೆಹಲಿ:ದೇಶದಲ್ಲಿ ರೈಲು ಅಪಘಾತಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ದಿಟ್ಟ ಕ್ರಮಕ್ಕೆ ಮುಂದಾಗಿದೆ. ರೈಲು ಅಪಘಾತಗಳನ್ನು ತಪ್ಪಿಸಲು ಜಾರಿಗೆ ತಂದಿರುವ 'ಕವಚ' ಸುರಕ್ಷತಾ ವ್ಯವಸ್ಥೆಯನ್ನು ಎಲ್ಲ ರೈಲು ಮಾರ್ಗಗಳಲ್ಲಿ ಅಳವಡಿಸಲು ನಿರ್ಧರಿಸಿದೆ.
ಲೋಕಸಭೆಯಲ್ಲಿ ಗುರುವಾರ ರೈಲ್ವೆ ಇಲಾಖೆಗೆ 7.89 ಲಕ್ಷ ಕೋಟಿ ರೂ ಮೊತ್ತದ ಅನುದಾನಕ್ಕೆ ಅನುಮೋದನೆ ನೀಡಿದ ಬಳಿಕ ಮಾತನಾಡಿದ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್, "ರೈಲುಗಳ ಅಪಘಾತ ತಪ್ಪಿಸಲು ಅಭಿವೃದ್ಧಿಪಡಿಸಿರುವ ಸ್ವಯಂಚಾಲಿತ ಸುರಕ್ಷತಾ ವ್ಯವಸ್ಥೆಯಾದ ಕವಚವನ್ನು ದೇಶದ ಎಲ್ಲ ರೈಲು ಮಾರ್ಗಗಳಲ್ಲಿ ಅಳವಡಿಸಲಾಗುವುದು. ರೈಲ್ವೆಯ ಪ್ರತಿ ಹಳಿಗಳಲ್ಲಿ ಈ ಸುರಕ್ಷತಾ ವ್ಯವಸ್ಥೆಯನ್ನು ಸ್ಥಾಪಿಸಲು ಪ್ರಯತ್ನ ನಡೆಸಿದ್ದೇವೆ" ಎಂದು ಅವರು ಹೇಳಿದರು.
ಕಾಂಗ್ರೆಸ್ ಸರ್ಕಾರದ ವೈಫಲ್ಯ:"ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪ್ರಯಾಣಿಕರ ಸುರಕ್ಷತೆಗಾಗಿ ಏನನ್ನೂ ಮಾಡಿಲ್ಲ. 58 ವರ್ಷಗಳ ಆಡಳಿತದಲ್ಲಿ 2014ರವರೆಗೆ ಒಂದು ಕಿಲೋ ಮೀಟರ್‌ಗೂ ಸ್ವಯಂಚಾಲಿತ ರೈಲು ಸುರಕ್ಷತಾ ವ್ಯವಸ್ಥೆಯಾದ ಕವಚವನ್ನು ಅಳವಡಿಸಿರಲಿಲ್ಲ. ಬರೀ ಪ್ರಯೋಗಗಳನ್ನು ಮಾತ್ರ ನಡೆಸಲಾಗಿತ್ತು. ಆದರೆ ಅದನ್ನು ಅನುಷ್ಠಾನಗೊಳಿಸಿರಲಿಲ್ಲ" ಎಂದು ಕೇಂದ್ರ ಸಚಿವರು ಹೇಳಿದರು.
"ಯುಪಿಎ ಮತ್ತು ಎನ್ಡಿಎ ಸರ್ಕಾರದ ಕಾರ್ಯಶೈಲಿ ವಿಭಿನ್ನವಾಗಿದೆ. ಈ ಹಿಂದೆ, ರೈಲ್ವೆ ಇಲಾಖೆಯಲ್ಲಿ ಕೇಂದ್ರೀಕೃತ ವಿಧಾನ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರೀಕೃತ ವ್ಯವಸ್ಥೆಯನ್ನು ಜಾರಿಗೆ ತಂದೆವು. ಹಲವು ಕಡೆ ಕವಚ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ದೇಶಾದ್ಯಂತ ಜಾರಿಗೆ ತರಲಾಗುವುದು" ಎಂದು ಭರವಸೆ ನೀಡಿದರು.