ಹೈದರಾಬಾದ್:ತೆಲುಗು ರಾಜ್ಯಗಳಲ್ಲಿ ನಾಲ್ಕು ದಿನಗಳ ಸಂಕ್ರಾಂತಿ ಸಂಭ್ರಮದಲ್ಲಿ ಮೂರನೇ ದಿನವನ್ನು ಕನುಮ ಹಬ್ಬ ಎಂದು ಆಚರಿಸಲಾಗುತ್ತದೆ. ಅನಾದಿ ಕಾಲದ ಪದ್ಧತಿ ಪ್ರಕಾರ, ಕನುಮ ಹಬ್ಬದ ದಿನ ಪ್ರಯಾಣ ಮಾಡುಬಾರದೆಂದು, ಊರಿನ ಗಡಿಯನ್ನೂ ದಾಟಬಾರದು ಎಂದು ಹೇಳಲಾಗಿದೆ. ಈ ದಿನ ಪ್ರಯಾಣ ಮಾಡಬಾರದೆಂಬ ಪದ್ದತಿ ಜಾರಿಗೆ ಬಂದಿದ್ದು ಏಕೆ, ಇದರ ಹಿಂದಿನ ಕಾರಣವೇನು ಎಂಬುದರ ಕುರಿತ ವರದಿ ಇಲ್ಲಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನತೆ ಸಂಕ್ರಾಂತಿಯನ್ನು 'ಪೆದ್ದ ಪಂಡುಗ' ಅಂದರೆ ದೊಡ್ಡ ಹಬ್ಬ ಎಂದು ಕರೆಯುತ್ತಾರೆ. ಸಂಕ್ರಾಂತಿಯ ಸಂದರ್ಭದಲ್ಲಿ ಗ್ರಾಮಗಳು ರಂಗುರಂಗಿನ ರಂಗೋಲಿಗಳಿಂದ ಕಂಗೊಳಿಸುತ್ತವೆ. ವಿವಿಧ ಭಕ್ಷ್ಯಗಳು, ಭೋಗಿ, ಹರಿದಾಸರ ಕೀರ್ತನೆಗಳು, ಕೋಲೆ ಬಸವ ಆಡಿಸುವವರ ಶಹನಾಯಿಯ ನಾದಸ್ವರದ ಸಡಗರವನ್ನು ಹೆಚ್ಚಿಸುತ್ತದೆ.
ಈ ಸಡಗರದಿಂದ ಹಬ್ಬಕ್ಕೆ ಸ್ವಗ್ರಾಮಕ್ಕೆ ಬಂದವರು ಮರಳಿ ತಾವಿರುವ ನಗರಗಳಿಗೆ ಹೋಗಲು ಇಷ್ಟಪಡುವುದಿಲ್ಲ. ಆದರೆ, ಕೆಲಸದ ನಿಮಿತ್ತ ಮತ್ತು ಇತರ ವ್ಯವಹಾರಗಳ ಕಾರಣ ಅವರಿಗೆ ನಗರಗಳಿಗೆ ಹೋಗುವುದು ಅನಿವಾರ್ಯವಾಗುತ್ತದೆ. ಆದರೆ, ತೆಲುಗು ರಾಜ್ಯಗಳಲ್ಲಿ ಕನುಮ ಹಬ್ಬದ ದಿನ ಪ್ರಯಾಣ ಬೆಳೆಸಬಾರದು, ಗ್ರಾಮದ ಗಡಿಯನ್ನೂ ದಾಟಬಾರದು ಎನ್ನುತ್ತಾರೆ.
ಕನುಮ ದಿನದಂದು ಕಾಗೆಗಳು ಹಾರುದಿಲ್ಲವೇ?: ಒಂದು ಗಾದೆ ಮಾತಿನ ಪ್ರಕಾರ, ಕನುಮ ದಿನ ಕಾಗೆಗಳು ಕೂಡ ಹಾರುವುದಿಲ್ಲ ಎನ್ನುತ್ತಾರೆ. ಅದಕ್ಕಾಗಿಯೇ ಸಂಕ್ರಾಂತಿ ಹಬ್ಬಕ್ಕೆ ಬಂದವರು ಕನುಮ ದಿನದಂದು ಊರುಗಳಿಗೆ ಪ್ರಯಾಣ ಬೆಳೆಸಬಾರದು ಎಂದು ಹಿರಿಯರು ಹೇಳುತ್ತಾರೆ.
ದನಕರುಗಳಿಗೆ ಪೂಜೆ: ಗ್ರಾಮೀಣ ಜನರಿಗೆ ಜಾನುವಾರುಗಳೇ ದೊಡ್ಡ ಸಂಪತ್ತು. ವರ್ಷವಿಡೀ ರೈತರಿಗೆ ನೆರವಾಗಿ ಜಮೀನಿನಲ್ಲಿ ಶ್ರಮಿಸುವ ಎತ್ತುಗಳು ಹಾಗೂ ದನಕರುಗಳನ್ನು ಕನುಮ ಹಬ್ಬದ ದಿನ ಪೂಜಿಸುವುದು ಸಂಪ್ರದಾಯವಾಗಿದೆ. ಇಲ್ಲಿ ಕನುಮ ದಿನದಂದು ಮುಂಜಾನೆಯೇ ಜಾನುವಾರುಗಳನ್ನು ಗ್ರಾಮದ ಕೆರೆಗಳಿಗೆ ಕೊಂಡೊಯ್ದು ಸ್ನಾನ ಮಾಡಿಸಿ, ಅವುಗಳ ಕೊಂಬಿಗೆ ಬಣ್ಣ ಬಳಿಯುತ್ತಾರೆ ಮತ್ತು ಅರಿಶಿಣ ಮತ್ತು ಕುಂಕುಮ ಹಚ್ಚುತ್ತಾರೆ. ದನಕರುಗಳ ಕಾಲಿಗೆ ಮುತ್ತಿನ ಕಾಲ್ಗೆಜ್ಜೆ ಕಟ್ಟಿ ಸಂಭ್ರಮಿಸುತ್ತಾರೆ. ಬಳಿಕ ಪೂಜೆ ಮಾಡಿ ಮೇವು ನೀಡುತ್ತಾರೆ.
ದನಕರುಗಳಿಗೆ ವಿಶ್ರಾಂತಿ:ಬಿಸಿಲು, ಮಳೆ ಲೆಕ್ಕಿಸದೇ ವರ್ಷವಿಡೀ ದುಡಿದ ಎತ್ತುಗಳು ಮತ್ತು ದನಕರುಗಳಿಗೆ ಕನುಮ ದಿನಪೂರ್ತಿ ವಿಶ್ರಾಂತಿ ನೀಡುತ್ತಾರೆ. ಹಿಂದಿನ ಕಾಲದಲ್ಲಿ ಎತ್ತಿನಗಾಡಿಯನ್ನು ಪ್ರಯಾಣಕ್ಕೆ ಬಳಸುತ್ತಿದ್ದರು. ವರ್ಷಕ್ಕೊಮ್ಮೆ ಬರುವ ಕನುಮ ದಿನದಂದು ಕೂಡ ಎತ್ತುಗಳಿಗೆ ವಿಶ್ರಾಂತಿ ಕೊಡದೇ ಶ್ರಮ ನೀಡಬಾರದು ಎಂಬ ಕಾರಣಕ್ಕೆ ಪ್ರಯಾಣ ಬೆಳೆಸಬಾರದು ಎಂಬ ಉದ್ದೇಶದಿಂದ ಹಿರಿಯರು ಈ ಆಚಾರವನ್ನು ನಡೆಸಿಕೊಂಡು ಬಂದರು.
ಸದ್ಯ ಎತ್ತಿಗಾಡಿಗಳಿಲ್ಲ, ಮೋಟಾರು ವಾಹನಗಳು ಇವೆಯಲ್ಲಾ ಏಕೆ ಪ್ರಯಾಣ ಮಾಡಬಾರದು ಎಂಬ ಪ್ರಶ್ನೆ ಈಗ ನಿಮ್ಮಲ್ಲಿ ಮೂಡುತ್ತದೆ. ವರ್ಷಕ್ಕೊಮ್ಮೆ ಸ್ವಗ್ರಾಮಕ್ಕೆ ಅಥವಾ ಊರಿಗೆ ಬಂದವರು, ಅಲ್ಲಿ ತಮ್ಮ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಒಂದು ದಿನ ಕಾಲ ಕಳೆಯಲಿ ಎಂಬ ಉದ್ದೇಶವೂ ಕೂಡ ಕನುಮ ಹಬ್ಬದಂದು ಪ್ರಯಾಣ ಮಾಡಬಾರದೆಂಬ ಆಚರಣೆಗೆ ಕಾರಣವಾಗಿದೆ.
ಇದನ್ನೂ ಓದಿ:ಮಹಾಕುಂಭ ಮೇಳ, 2ನೇ ದಿನ: ಮಕರ ಸಂಕ್ರಾಂತಿ ಪ್ರಯುಕ್ತ 1.38 ಕೋಟಿ ಭಕ್ತರಿಂದ 'ಅಮೃತ ಸ್ನಾನ'
ಇದನ್ನೂ ಓದಿ:ಇಂದು ಸಂಕ್ರಾಂತಿ ಹಬ್ಬ, ನಿಮ್ಮ ರಾಶಿ ಭವಿಷ್ಯ: ಹೂಡಿಕೆಯಲ್ಲಿ ಲಾಭ, ದೀರ್ಘಕಾಲದಿಂದ ಉಳಿದ ಸಾಲಗಳ ಮರುಪಾವತಿ