ಲಖನೌ (ಉತ್ತರ ಪ್ರದೇಶ): ಸಂವಿಧಾನ ಬದಲಿಸುವ ಬಗ್ಗೆ ಮಾತನಾಡುವ ಬಿಜೆಪಿ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ ಏಕೆ ಪಕ್ಷದಿಂದ ಅಮಾನತು ಮಾಡಲ್ಲ?, ಸಂವಿಧಾನದ ವಿಷಯದಲ್ಲಿ ಮೋದಿ ಮೌನವಾಗಿರುವುದು ಯಾಕೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರೊಂದಿಗೆ ನಡೆದ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಖರ್ಗೆ, ನಿಮ್ಮ (ಮೋದಿ) ಧೈರ್ಯದ ಬಗ್ಗೆ ಇಷ್ಟೆಲ್ಲಾ ಮಾತನಾಡಲಾಗುತ್ತದೆ. ನಿಮಗೆ 56 ಇಂಚಿನ ಎದೆ ಇದೆ. ಹಾಗಾದರೆ, ಸಂವಿಧಾನ ಬದಲಿಸುವ ಬಗ್ಗೆ ಮಾತನಾಡುವರನ್ನು ಏಕೆ ಬೆದರಿಸಬಾರದು?, ಅಂತಹವರನ್ನು ಪಕ್ಷದಿಂದ ಯಾಕೆ ಅಮಾನತುಗೊಳಿಸಬಾರದು?. ಸಂವಿಧಾನ, ದೇಶ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ನೀವು (ಮೋದಿ) ಈ ಕೆಲಸ ಏಕೆ ಮಾಡಬಾರದರು ಎಂದು ಪ್ರಶ್ನಿಸಿದರು.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಧಿಕಾರಕ್ಕೆ ಬಂದರೆ ಸಂವಿಧಾನದಲ್ಲಿ ಬದಲಾವಣೆ ತರುತ್ತೇವೆ ಎಂದು ಹೇಳುತ್ತಾರೆ. ಸಂವಿಧಾನವನ್ನು ಬದಲಾಯಿಸಲು ಮೂರನೇ ಎರಡರಷ್ಟು ಬಹುಮತ ಬೇಕು ಎಂದು ಕರ್ನಾಟಕದ ಬಿಜೆಪಿ ನಾಯಕ ಅನಂತಕುಮಾರ್ ಹೆಗಡೆ ಎನ್ನುತ್ತಾರೆ. ಉತ್ತರ ಪ್ರದೇಶದ ಹಲವು ನಾಯಕರು ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಪದೇ ಪದೇ ಮಾತನಾಡುತ್ತಾರೆ. ಆದರೂ, ಪ್ರಧಾನಿ ಮೋದಿ ಮೌನವಾಗಿದ್ದಾರೆ ಎಂದು ಟೀಕಿಸಿದರು.
ಇದೇ ವೇಳೆ, ಬಿಜೆಪಿಯಿಂದ ಚುನಾವಣಾ ಪ್ರಕ್ರಿಯೆ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದ ಖರ್ಗೆ, ಬಿಜೆಪಿಯ ದೊಡ್ಡ ನಾಯಕರು ಎಲ್ಲೆಲ್ಲಿ ಸ್ಪರ್ಧಿಸಿದ್ದಾರೆ, ಅಲ್ಲಿ ಪ್ರತಿಪಕ್ಷದ ನಾಯಕರಿಗೆ ನಾಮಪತ್ರ ಸಲ್ಲಿಸದಂತೆ ತಡೆಯಲಾಗುತ್ತಿದೆ. ನಮ್ಮ ಚುನಾವಣಾ ಏಜೆಂಟರಿಗೂ ಬೆದರಿಕೆ ಹಾಕಲಾಗುತ್ತದೆ. ಹೈದರಾಬಾದ್‌ನಲ್ಲಿ ಬಿಜೆಪಿಯ ಮಹಿಳಾ ಅಭ್ಯರ್ಥಿಯೊಬ್ಬರು ಬುರ್ಖಾ ತೆಗೆದು ಮಹಿಳೆಯರ ಗುರುತನ್ನು ಪರಿಶೀಲಿಸುತ್ತಿರುವ ದೃಶ್ಯಗಳನ್ನು ನಾನು ನೋಡಿದ್ದೇನೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ನಡೆಯುವುದು ಹೀಗೆಯೇ?, ಭಯ ಹುಟ್ಟಿಸಿ ಚುನಾವಣೆಯನ್ನು ಹೇಗೆ ನಡೆಸುತ್ತಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಮೋದಿ ಬೀಳ್ಕೊಡುಗೆಗೆ ನಿರ್ಧಾರ: ಲೋಕಸಭೆ ಚುನಾವಣೆಯ ಮತ ಎಣಿಕೆ ದಿನವಾದ ಜೂನ್ 4ರಂದು ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟ ಸರ್ಕಾರ ರಚಿಸಲಿದೆ ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಜೊತೆಗೆ ಪ್ರಧಾನಿ ಮೋದಿಯವರಿಗೆ ಬೀಳ್ಕೊಡುಗೆ ನೀಡಲು ದೇಶದ ಜನರು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ದೇಶದ ಪರಿಸ್ಥಿತಿಯನ್ನು ಗಮನಿಸಿದರೆ, ಜೂನ್ 4ರಂದು ಇಂಡಿಯಾ ಮೈತ್ರಿಕೂಟ ಹೊಸ ಸರ್ಕಾರವನ್ನು ರಚಿಸಲಿದೆ ಎಂದು ನಾನು ವಿಶ್ವಾಸದಿಂದ ಹೇಳುತ್ತೇನೆ. ಪ್ರಸ್ತುತ ನಡೆಯುತ್ತಿರುವ ಚುನಾವಣೆಯು ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸುವ ಹೋರಾಟವಾಗಿದೆ. ದೇಶದ ಭವಿಷ್ಯ ಮತ್ತು ಮುಂದಿನ ಪೀಳಿಗೆಯ ಹಕ್ಕುಗಳನ್ನು ಕಾಪಾಡಲು ನಡೆಯುತ್ತಿರುವ ಚುನಾವಣೆ ಇದಾಗಿದೆ. ದೇಶದ ಭವಿಷ್ಯ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಮತ್ತೆ ಗುಲಾಮರಾಗುತ್ತೇವೆ. ಪ್ರಜಾಪ್ರಭುತ್ವ ಇಲ್ಲವಾದರೆ, ನಿರಂಕುಶಾಧಿಕಾರ ಮತ್ತು ಸರ್ವಾಧಿಕಾರ ಇದ್ದರೆ, ನಿಮ್ಮ ಸಿದ್ಧಾಂತದ ಆಧಾರದ ಮೇಲೆ ನೀವು ಯಾರನ್ನಾದರೂ ಹೇಗೆ ಆಯ್ಕೆ ಮಾಡುತ್ತೀರಿ? ಖರ್ಗೆ ಕೇಳಿದರು.
ಒಂದು ಹೊತ್ತಿನ ಊಟವೂ ಸಿಗದ, ಉದ್ಯೋಗ ಸಿಗದ, ಇಂಜಿನಿಯರ್, ಡಾಕ್ಟರ್, ಡಿಪ್ಲೋಮಾದಂತಹ ಪದವಿ ಮುಗಿದರೂ ನೌಕರಿ ಸಿಗದ ಹಾಗೂ ಬಡವರ ಪರವಾಗಿ ನಮ್ಮ ಹೋರಾಟ ನಡೆಯುತ್ತಿದೆ. ಸರ್ಕಾರದಲ್ಲಿ ಇಷ್ಟೊಂದು ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿಲ್ಲ. ನಮ್ಮ ಮೈತ್ರಿಯು ನಿರುದ್ಯೋಗ ಮತ್ತು ಬೆಲೆ ಏರಿಕೆಯ ವಿರುದ್ಧವಾಗಿದೆ. ಕೇಂದ್ರದಲ್ಲಿ 'ಇಂಡಿಯಾ' ಮೈತ್ರಿಕೂಟ ಗೆದ್ದರೆ 10 ಕೆಜಿ ಪಡಿತರ ನೀಡುತ್ತೇವೆ ಎಂದು ಖರ್ಗೆ ಘೋಷಿಸಿದರು.
ಅಖಿಲೇಶ್ ಯಾದವ್ ಮಾತನಾಡಿ, ದೇಶದಲ್ಲಿ 4 ಹಂತಗಳ ಚುನಾವಣೆ ನಂತರ ಬಿಜೆಪಿ ಕಟ್ಟಿರುವ ಸುಳ್ಳಿನ ಪರ್ವ ಇಳಿಮುಖವಾಗಿದೆ. ಜೂನ್ 4ರಂದು ಹೊಸ ಭಾರತ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ, ತಮ್ಮ ಸೋಲಿನಿಂದಾಗಿ ಪ್ರಚಾರ ಭಾಷಣಗಳಲ್ಲಿ ಬಿಜೆಪಿ ಭಾಷೆ ಬದಲಾಗಿದೆ. ದೆಹಲಿಯಲ್ಲಿ 10 ವರ್ಷ ಮತ್ತು ಉತ್ತರ ಪ್ರದೇಶದಲ್ಲಿ ಏಳು ವರ್ಷಗಳ ಆಡಳಿತದಲ್ಲಿ ಅವರ ಭರವಸೆಗಳೆಲ್ಲವೂ ಸುಳ್ಳಾಗಿವೆ. ರೈತರ ಆದಾಯ ದ್ವಿಗುಣಗೊಳಿಸುವ ಸುಳ್ಳು ಭರವಸೆ ಮತ್ತು ಕಪ್ಪು ಕಾನೂನುಗಳ ಮೂಲಕ ರೈತರಿಗೆ ಮಾಡಿದ ಅನ್ಯಾಯವನ್ನು ಮರೆತಿಲ್ಲ. ಈ ಸರ್ಕಾರದಲ್ಲಿ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಪಿಒಕೆ ಭಾರತದ ಭಾಗ, ಮರಳಿ ಪಡೆಯುತ್ತೇವೆ: ಅಮಿತ್ ಶಾ