ಕರ್ನಾಟಕ

karnataka

ETV Bharat / bharat

ಕೇಜ್ರಿವಾಲ್​- ಗೆಹ್ಲೋಟ್​ ಮಧ್ಯೆ ಬಿರುಕು ಮೂಡಿಸಿತ್ತೆ ಧ್ವಜಾರೋಹಣ?: ದೆಹಲಿ ಸಚಿವ ರಾಜೀನಾಮೆಗೆ ಕಾರಣಗಳಿವು - ಕೈಲಾಶ್​ ಗೆಹ್ಲೋಟ್

ಆಪ್​ ಹಿರಿಯ ನಾಯಕ, ಸಚಿವ ಕೈಲಾಶ್​ ಗೆಹ್ಲೋಟ್​ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಗೆಹ್ಲೋಟ್​ ಮತ್ತು ಪಕ್ಷದ ನಾಯಕತ್ವದ ನಡುವೆ ಮುಸುಕಿನ ಗುದ್ದಾಟವೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಅರವಿಂದ್​ ಕೇಜ್ರಿವಾಲ್​ -ಕೈಲಾಶ್​ ಗೆಹ್ಲೋಟ್
ಅರವಿಂದ್​ ಕೇಜ್ರಿವಾಲ್​ -ಕೈಲಾಶ್​ ಗೆಹ್ಲೋಟ್ (ETV Bharat)

By ETV Bharat Karnataka Team

Published : Nov 17, 2024, 5:11 PM IST

ನವದೆಹಲಿ:ದೆಹಲಿ ವಿಧಾನಸಭೆ ಚುನಾವಣೆಗೂ ಮುನ್ನ ಆಡಳಿತಾರೂಢ ಆಮ್​ ಆದ್ಮಿ ಪಕ್ಷಕ್ಕೆ (ಆಪ್​) ಬಿಗ್​ ಶಾಕ್​ ಉಂಟಾಗಿದೆ. ಹಿರಿಯ ನಾಯಕ, ಸಚಿವ ಕೈಲಾಶ್​ ಗೆಹ್ಲೋಟ್​ ಅವರು ರಾಜೀನಾಮೆ ನೀಡಿದ್ದು, ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಗೆಹ್ಲೋಟ್​ ಮತ್ತು ಪಕ್ಷದ ನಾಯಕತ್ವದ ನಡುವೆ ಮುಸುಕಿನ ಗುದ್ದಾಟವೇ ಇದಕ್ಕೆ ಕಾರಣ ಎಂಬ ಚರ್ಚೆ ಶುರುವಾಗಿದೆ.

ಆಪ್​ ಸಂಚಾಲಕ, ಮಾಜಿ ಸಿಎಂ ಅರವಿಂದ್​​​ ಕೇಜ್ರಿವಾಲ್​ ಅವರಿಗೆ ಪತ್ರ ಬರೆದಿರುವ ಕೈಲಾಶ್ ಗೆಹ್ಲೋಟ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ತಿಳಿಸಿದ್ದಾರೆ.

ಹಿರಿಯ ನಾಯಕನಾಗಿದ್ದರೂ, ಕೆಲವು ವಿಚಾರಗಳಲ್ಲಿ ಪಕ್ಷವು ತಮ್ಮನ್ನು ಕಡೆಗಣಿಸುತ್ತಿದೆ ಎಂಬ ಅಸಮಾಧಾನ ಸ್ವತಃ ಗೆಹ್ಲೋಟ್​ ಅವರಲ್ಲಿತ್ತು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಚುನಾವಣೆಗೂ ಮೊದಲು ಗೆಹ್ಲೋಟ್​ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರ ಕಾರಣಗಳು ಏನೆಂಬುದನ್ನು ಹೀಗೆ ವಿವರಿಸಬಹುದು.

ತಪ್ಪಿದ ಸಿಎಂ ಸ್ಥಾನ?ಅಬಕಾರಿ ನೀತಿ ಹಗರಣದಲ್ಲಿ ಆರೋಪಿತರಾಗಿರುವ ಅರವಿಂದ್​ ಕೇಜ್ರಿವಾಲ್​ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮುಂದಿನ ಸಿಎಂ ಆಯ್ಕೆಯ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಸಿದರು. ಈ ವೇಳೆ ಹಲವರು ಸಿಎಂ ಸ್ಥಾನಕ್ಕೆ ಅತಿಶಿ ಅವರನ್ನು ಆಯ್ಕೆ ಮಾಡಿದ್ದರು. ಇದು ಕೈಲಾಶ್​ ಅವರಲ್ಲಿ ಬೇಸರ ಉಂಟು ಮಾಡಿತ್ತು ಎಂದು ಹೇಳಲಾಗಿದೆ. ಹಿರಿತನದ ಆಧಾರದ ಮೇಲೆ ಸಿಎಂ ಸ್ಥಾನ ತಮಗೇ ಸಿಗುವ ನಿರೀಕ್ಷೆ ಅವರಲ್ಲಿತ್ತು.

ಸ್ವಾತಂತ್ರ್ಯ ಧ್ವಜಾರೋಹಣ ವಿದ್ಯಮಾನ:ಆಗಸ್ಟ್​ 15 ರ ಸ್ವಾತಂತ್ರ್ಯ ಧ್ವಜಾರೋಹಣ ವಿಚಾರವೂ ಕೂಡ ಗೆಹ್ಲೋಟ್​ ಅವರಲ್ಲಿ ಅಸಮಾಧಾನ ಉಂಟು ಮಾಡಿತ್ತು. ಮದ್ಯ ನೀತಿ ಹಗರಣದ ಆರೋಪದ ಮೇಲೆ ಜೈಲಿನಲ್ಲಿದ್ದ ಅಂದಿನ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅನುಪಸ್ಥಿತಿಯಲ್ಲಿ, ಧ್ವಜಾರೋಹಣ ಯಾರು ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸಿತ್ತು.

ಆಗ ಶಿಕ್ಷಣ ಸಚಿವರಾಗಿದ್ದ ಅತಿಶಿ ಅವರನ್ನು ಧ್ವಜಾರೋಹಣ ನಡೆಸುವಂತೆ ಕೇಜ್ರಿವಾಲ್ ಅವರು ಸೂಚಿಸಿದ್ದರು. ಈ ವಿಚಾರದಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಮಧ್ಯಪ್ರವೇಶಿಸಿ, ಕೇಜ್ರಿವಾಲ್​​ರ ನಿರ್ದೇಶನವನ್ನು ಅಮಾನ್ಯವೆಂದು ಪರಿಗಣಿಸಿದರು. ಬದಲಿಗೆ ದೆಹಲಿ ಗೃಹ ಸಚಿವ ಕೈಲಾಶ್ ಗೆಹ್ಲೋಟ್ ಅವರನ್ನು ಧ್ವಜಾರೋಹಣಕ್ಕೆ ನೇಮಿಸಿದರು. ಲೆಫ್ಟಿನೆಂಟ್ ಗವರ್ನರ್ ಕಚೇರಿ ಅಧಿಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಎಎಪಿ ಆರೋಪಿಸಿತು.

ಸಿಎಂ ಕೇಜ್ರಿವಾಲ್​​ ತಮ್ಮನ್ನು ಸೂಚಿಸದೆ, ಅತಿಶಿ ಅವರನ್ನು ನಿರ್ದೇಶಿಸಿದ್ದು, ಪಕ್ಷವು ಗವರ್ನರ್​​ ನಿರ್ಧಾರವನ್ನು ಬಹಿರಂಗವಾಗಿ ಟೀಕಿಸಿದ್ದೆಲ್ಲವೂ ಕೈಲಾಶ್​ ಗೆಹ್ಲೋಟ್​ ಮತ್ತು ನಾಯಕತ್ವದ ನಡುವೆ ಬಿರುಕು ಮೂಡಿಸಿತ್ತು ಎಂದು ಹೇಳಲಾಗಿದೆ.

ಖಾತೆ ಬದಲು:ಕಳೆದ ವರ್ಷ ಡಿಸೆಂಬರ್‌ನಲ್ಲಿ, ಕಾನೂನು ಇಲಾಖೆಯನ್ನು ಗೆಹ್ಲೋಟ್‌ ಅವರಿಂದ ಹಿಂಪಡೆದು ಅತಿಶಿಗೆ ಹಸ್ತಾಂತರಿಸಲಾಯಿತು. ಮಾಜಿ ಸಿಎಂ ಕೇಜ್ರಿವಾಲ್​ ಅವರ ಈ ನಿರ್ಧಾರವೂ ಕೈಲಾಶ್​ರಲ್ಲಿ ಅಸಮಾಧಾನ ತಂದಿತ್ತು ಎಂದು ಮೂಲಗಳು ತಿಳಿಸಿವೆ.

ದಾರಿ ತಪ್ಪಿದ ಹೋರಾಟ:ಕೈಲಾಶ್​​ ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದಂತೆ ಪಕ್ಷದ ಹೋರಾಟವು ರಾಜಕೀಯಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಅಂಶವೂ ಈ ನಿರ್ಧಾರಕ್ಕೆ ಕಾರಣಗಳಲ್ಲಿ ಒಂದಾಗಿದೆ. ಪಕ್ಷವು ಜನರ ಹಕ್ಕುಗಳಿಗಾಗಿ ಹೋರಾಡುವ ಬದಲು ನಮ್ಮ ಸ್ವಂತ ರಾಜಕೀಯ ಕಾರ್ಯಸೂಚಿಗಾಗಿ ಮಾತ್ರ ಹೋರಾಡುತ್ತಿದ್ದೇವೆ. ಇದು ದೆಹಲಿಯ ಜನರಿಗೆ ಮೂಲಭೂತ ಸೇವೆಗಳನ್ನು ತಲುಪಿಸುವಲ್ಲಿ ಹಿನ್ನಡೆಯಾಗಿದೆ. ದೆಹಲಿ ಸರ್ಕಾರ ತನ್ನ ಬಹುಪಾಲು ಸಮಯವನ್ನು ಕೇಂದ್ರದ ವಿರುದ್ಧ ಹೋರಾಟ ಮಾಡಲು ಮೀಸಲಿಟ್ಟಿದೆ. ಇದರಿಂದ ದೆಹಲಿಯ ಪ್ರಗತಿ ಸಾಧ್ಯವಿಲ್ಲ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:ಆಪ್​ ಸಚಿವ ಕೈಲಾಶ್​ ಗೆಹ್ಲೋಟ್​ ರಾಜೀನಾಮೆ; ಚುನಾವಣೆಗೂ ಮುನ್ನ ಕೇಜ್ರಿವಾಲ್​ಗೆ ಹಿನ್ನಡೆ

ABOUT THE AUTHOR

...view details