ಕರ್ನಾಟಕ

karnataka

ETV Bharat / bharat

ಜನರನ್ನು ಹೇಗೆ ದಾರಿ ತಪ್ಪಿಸಲಾಗುತ್ತಿದೆ ಎಂಬುದನ್ನು ಮುಂದೊಂದು ದಿನ ಹೇಳುತ್ತೇವೆ: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ - Rajiv Kumar cast vote - RAJIV KUMAR CAST VOTE

ಭಾರತೀಯ ಚುನಾವಣಾ ಆಯೋಗ ಮತ್ತು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (EVM) ಬಗ್ಗೆ ಜನರ ತಲೆಯಲ್ಲಿ ಬಿತ್ತುತ್ತಿರುವ ಅನುಮಾನದ ಬೀಜದ ಬಗ್ಗೆ ನಾವು ಒಂದು ದಿನ ಬಹಿರಂಗಪಡಿಸುತ್ತೇವೆ. ಅಲ್ಲದೇ ಜನರನ್ನು ಹೇಗೆ ದಾರಿ ತಪ್ಪಿಸಲಾಗುತ್ತಿದೆ ಎಂಬುದನ್ನು ಸಹ ತೋರಿಸುತ್ತೇವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದರು.

"We will reveal this one day and show how people are misled": CEC Rajiv on SC's verdict on voter turnout data
ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ಜ್ಞಾನೇಶ್ ಕುಮಾರ್ ಅವರೊಂದಿಗೆ ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (ಮಧ್ಯದಲ್ಲಿ) (IANS)

By ANI

Published : May 25, 2024, 3:06 PM IST

ನವದೆಹಲಿ: ದೇಶದಾದ್ಯಂತ 7 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 58 ಕ್ಷೇತ್ರಗಳಿಗೆ ಲೋಕಸಭೆ ಚುನಾವಣೆಯ 6ನೇ ಹಂತದ ಮತದಾನ ನಡೆಯುತ್ತಿದ್ದು, ಅಭ್ಯರ್ಥಿಗಳು, ಸಿನಿಮಾ ತಾರೆಯರು, ಕ್ರಿಕೆಟ್​ ಪಟುಗಳು ಆಯಾ ಪ್ರದೇಶದಲ್ಲಿ ಗುರುತಿಸಿದ ಮತಕೇಂದ್ರಕ್ಕೆ ತೆರಳಿ ಮತದಾನ ಮಾಡಿದರು. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಕುಟುಂಬ ಸಹಿತ ದೆಹಲಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಮತ ಚಲಾಯಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾನು ಮೊದಲ ಬಾರಿಗೆ ಮತ ಚಲಾಯಿಸಿದಾಗ, ನಾನು ನನ್ನ ತಂದೆಯೊಂದಿಗೆ ಆಗಮಿಸಿದ್ದೆ. ಇಂದು ಅವರಿಗೆ 95 ವರ್ಷ. ಇಂದು ಅವರು ನನ್ನೊಂದಿಗೆ ಮತ ಚಲಾಯಿಸಿದ್ದಾರೆ. ಇಂದು ಮೂರು ತಲೆಮಾರುಗಳು ಒಟ್ಟಾಗಿ ಮತ ಚಲಾಯಿಸಿರುವುದು ನನಗಷ್ಟೇ ಅಲ್ಲ ಪ್ರತಿಯೊಬ್ಬರು ಹೆಮ್ಮೆ ಪಡುವ ವಿಷಯವಾಗಿದೆ. ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಇಡೀ ದೇಶದಲ್ಲಿ ಉತ್ತಮ ಮತದಾನ ನಡೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಎಷ್ಟು ಶಾಂತಿಯುತವಾಗಿ ಮತದಾನ ನಡೆಯುತ್ತಿದೆ ಅನ್ನೋದನ್ನು ನೀವು ನೋಡುತ್ತಿದ್ದೀರಿ" ಎಂದರು.

ಮತದಾನ ಮುಗಿದ ಬಳಿಕ 48 ಗಂಟೆಗಳ ಒಳಗೆ ಪ್ರತಿ ಮತಗಟ್ಟೆಗಳಲ್ಲಿ ನಡೆದ ಮತದಾನದ ಅಂತಿಮ ವಿವರಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಲು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಈ ವಿಷಯ ಸೇರಿದಂತೆ ಚುನಾವಣಾ ಆಯೋಗ ಮತ್ತು ಇವಿಎಂಗಳ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಗಳ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ರಾಜೀವ್ ಕುಮಾರ್, "ಅನುಮಾನದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ. ಒಂದು ದಿನ ನಾವು ಅದರ ಬಗ್ಗೆ ಎಲ್ಲರಿಗೂ ಹೇಳುತ್ತೇವೆ" ಎಂದರು.

ಅನುಮಾನ ವ್ಯಕ್ತಪಡಿಸುವವರಿಗೆ ಸುಪ್ರೀಂ ಉತ್ತರ:ಬೂತ್‌ವಾರು ಮತದಾರರ ಮತದಾನ, ಚುನಾವಣಾ ಪ್ರಕ್ರಿಯೆಗಳ ಸುತ್ತಲಿನ ಅನುಮಾನಗಳು ಮತ್ತು ಅನುಮಾನಗಳನ್ನು ಹೋಗಲಾಡಿಸುವ ಅಗತ್ಯ ಕ್ರಮಗಳ ಬಗ್ಗೆ ಪ್ರಸ್ತಾಪಿಸಿದ ರಾಜೀವ್ ಕುಮಾರ್, "ನಿನ್ನೆ ಮೊನ್ನೆ ವರೆಗೂ ಮತದಾರರ ದಿಕ್ಕು ತಪ್ಪಿಸುವವರಿಗೆ ಸುಪ್ರೀಂ ಕೋರ್ಟ್ ಉತ್ತರ ನೀಡಿದೆ. ಜನರನ್ನು ಹೇಗೆ ದಾರಿ ತಪ್ಪಿಸಲಾಗುತ್ತಿದೆ ಎಂಬುದನ್ನು ಮುಂದೊಂದು ದಿನ ಬಹಿರಂಗಪಡಿಸಲಾಗುವುದು. ದಾರಿ ತಪ್ಪಿಸುವ ಹೇಳಿಕೆಗಳಿಂದ ಮತದಾನದ ಮೇಲೆ ಪರಿಣಾಮ ಬೀರಿದೆ.

ಇವಿಎಂಗಳು ಸರಿಯಾಗಿವೆಯೇ ಅಥವಾ ಇಲ್ಲವೇ ಎಂದು ಜನರು ಆಶ್ಚರ್ಯ ಪಡುತ್ತಿರುವುದು ನಿಜ. ಇದರ ನಡುವೆ ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಹೀಗೆ ಎಲ್ಲೆಡೆ ಶಾಂತಿಯುತವಾಗಿ ಮತದಾನ ನಡೆಯುತ್ತಿರುವುದು ಸಂತಸದ ಸಂಗತಿ. ಚುನಾವಣಾ ಆಯೋಗ ಮತ್ತು ಇವಿಎಂ ಬಗ್ಗೆ ಅನುಮಾನದ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನ ನಡೆಯುತ್ತಿರುವುದು ನಿಜವಾದರೂ, ಜನರನ್ನು ಹೇಗೆ ದಾರಿ ತಪ್ಪಿಸುತ್ತಿದ್ದಾರೆ ಎಂಬುದರ ಬಗ್ಗೆ ಮುಂದೊಂದು ದಿನ ಖಚಿತವಾಗಿ ಎಲ್ಲರೊಂದಿಗೆ ಚರ್ಚಿಸುತ್ತೇವೆ" ಎಂದು ಹೇಳಿದರು.

"ಚುನಾವಣೆಗಳು ಅತ್ಯಂತ ಉತ್ಸಾಹದಿಂದ ನಡೆಯುತ್ತಿವೆ. ಬಿಸಿಲಿನ ನಡುವೆಯೂ ಮತದಾನದ ಪ್ರಮಾಣ ಉತ್ತಮವಾಗಿದೆ. ಇಂದಿನದ್ದು ಸೇರಿ ಎಲ್ಲ ಹಂತಗಳ ಮತದಾರರ ಸುಗಮವಾಗಿ ನಡೆದಿವೆ. ಮತದಾರರನ್ನು ಮತಗಟ್ಟೆಗೆ ಕರೆತರಲು ಮಾಡಿದ ಆಯೋಗದ ಹೊಸ ಹೊಸ ಕಾರ್ಯವೈಖರಿಗೆ ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಪ್ರತಿ ರಾಜ್ಯದಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ" ಎಂದು ರಾಜೀವ್ ಕುಮಾರ್ ಹೇಳಿದರು.

ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು, ಜ್ಞಾನೇಶ್ ಕುಮಾರ್ ಕೂಡ ದೆಹಲಿಯಲ್ಲಿ ಮತ ಚಲಾಯಿಸಿದರು.

ಇದನ್ನೂ ಓದಿ:ಮತಗಟ್ಟೆವಾರು ಅಂಕಿ - ಅಂಶ ಬಹಿರಂಗಪಡಿಸುವಂತೆ ನಿರ್ದೇಶಿಸಲು ಕೋರಿದ್ದ ಅರ್ಜಿ ವಜಾ - Turnout Disclosure Plea

ABOUT THE AUTHOR

...view details