ಮುಂಬೈ(ಮಹಾರಾಷ್ಟ್ರ): ರಾಜ್ಯದ ಜನತೆ ದಾರಿ ತಪ್ಪಿಸುವಂತಹ ಪ್ರಚಾರ ಮಾಡಿದವರ ವಿರುದ್ಧ ಹೋರಾಡಿದವರ ಪರ ಮತ ಚಲಾಯಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಅಭೂತಪೂರ್ವ ಗೆಲುವು ದಾಖಲಿಸಿದ ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಹಿಂದೆ ಮಹಾರಾಷ್ಟ್ರವು ದೃಢವಾಗಿ ನಿಂತಿದೆ ಎಂದು ಈ ಚುನಾವಣಾ ಫಲಿತಾಂಶ ತೋರಿಸಿದೆ. ಕಳೆದ ಎರಡು ವರ್ಷದಲ್ಲಿ ಪಕ್ಷ ಸಂಘಟನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಉಸ್ತುವಾರಿ ಭೂಪೇಂದ್ರ ಯಾದವ್ ಮತ್ತು ಹಿರಿಯ ನಾಯಕರಿಗೆ ಮತ್ತು ವಿಶೇಷವಾಗಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬಾವಂಕುಲೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ರಾಜ್ಯದಲ್ಲಿ ವಿರೋಧ ಪಕ್ಷಗಳು ಹರಡುತ್ತಿದ್ದ ದಾರಿ ತಪ್ಪಿಸುವಂತಹ ಪ್ರಚಾರವನ್ನು ಮಹಾರಾಷ್ಟ್ರದ ಜನರು ತಿರಸ್ಕರಿಸಿದ್ದಾರೆ. ನಾನು ಮಹಾರಾಷ್ಟ್ರದ ಜನತೆಗೆ ಧನ್ಯವಾದ ಹೇಳುತ್ತೇನೆ. ಆಧುನಿಕ ಅಭಿಮನ್ಯುಗಳಾದ ನಾವು, ಕೊನೆಗೂ ಚಕ್ರವ್ಯೂಹವನ್ನು ಭೇದಿಸಿದ್ದೇವೆ. ಇಡೀ ಮಹಾರಾಷ್ಟ್ರ ಪ್ರಧಾನಿ ಮೋದಿಯವರ ಹಿಂದೆ ಇದೆ. ಮೋದಿ ನೀಡಿದ ಏಕ್ ಹೈ ತೋ ಸೀಫ್ ಹೈ ಎಂಬ ಘೋಷಣೆಯನ್ನು ಮಹಾರಾಷ್ಟ್ರದ ಎಲ್ಲಾ ಸಮುದಾಯಗಳ ಜನರು ಸ್ವಾಗತಿಸಿದ್ದಾರೆ. ನಮಗೆ ಆಶೀರ್ವದಿಸಿದ ನಮ್ಮ ಪ್ರೀತಿಯ ಸಹೋದರಿಯರಿಗೆ (ಲಾಡ್ಲಿ ಬೆಹನಾ ಯೋಜನೆ ಫಲಾನುಭವಿಗಳು)ಧನ್ಯವಾದಗಳು ಎಂದು ಹೇಳಿದರು.