ವಯನಾಡು, ಕೇರಳ: ಮುಂಡಕ್ಕೈ, ಚೂರಲ್ಮಾಲ ಮತ್ತು ಮೆಪಾಡಿ ಪಂಚಾಯತ್ನಲ್ಲಿ ಭೀಕರ ಭೂ ಕುಸಿತ ಸಂಭವಿಸಿದ ತಿಂಗಳು ಗತಿಸಿದ್ದು, ಈ ದುರಂತದಲ್ಲಿ 231 ಜನರು ಸಾವನ್ನಪ್ಪಿದರೆ, ಕಣ್ಮರೆಯಾಗಿರುವ 78 ಮಂದಿ ಸುಳಿವು ಇನ್ನೂ ಸಿಕ್ಕಿಲ್ಲ. ಭಾರಿ ಮಳೆಯಿಂದ ಸಂಭವಿಸಿದ ಭೂ ಕುಸಿತದ ದುರಂತ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪ್ರವಾಹ ನೀರಿನಲ್ಲಿ ಕೊಚ್ಚಿ ಹೋದ ಜನರ ರಕ್ಷಣೆಗಾಗಿ ಸೇನೆ ಸೇರಿದಂತೆ ಸ್ಥಳೀಯ ವಿಪತ್ತು ನಿರ್ವಹಣಾ ತಂಡಗಳು ವಾರಗಳ ಕಾಲ ಅವಿರಹಿತ ಕಾರ್ಯಾಚರಣೆ ನಡೆಸಿದ್ದವು.
ವಿಪತ್ತಿನ ಪರಿಣಾಮ: ಎಂದಿನಂತೆ ಸುಂದರ ನಾಳೆಯ ಕನಸಿನೊಂದಿಗೆ ಮಲಗಿದ್ದ ಜನರಿಗೆ ಭೂ ಕುಸಿತ ಅಕ್ಷರಶಃ ದುಸ್ವಪ್ನವಾಗಿತ್ತು. ನಡು ರಾತ್ರಿಯಲ್ಲಿ ಎರಡು ಬಾರಿ ಭೂಮಿ ಕುಸಿತದಿಂದ ಉಂಟಾದ ಭಾರೀ ಪ್ರವಾಹಕ್ಕೆ 62 ಕುಟುಂಬಗಳು ಸಂಪೂರ್ಣ ಕೊಚ್ಚಿ ಹೋಗಿದ್ದವು. 183 ಮನೆಗಳು ಕಣ್ಮರೆಯಾಗಿದ್ದವು. 145 ಮನೆಗಳು ಸಂಪೂರ್ಣವಾಗಿ ನಾಶವಾಗಿದದವು . 170 ಮನೆಗಳು ಭಾಗಶಃ ಹಾನಿಗೊಳಗಾಗಿದ್ದವು. ಒಟ್ಟು 240 ಮನೆಗಳು ವಾಸಕ್ಕೆ ಯೋಗ್ಯ ಇಲ್ಲದಂತೆ ಭಗ್ನಗೊಂಡಿವೆ. ಒಟ್ಟು 638 ಮನೆಗಳ ಮೇಲೆ ನೇರ ಪರಿಣಾಮ ಬೀರಿದೆ. ಪ್ರವಾಹಕ್ಕೆ ಕೊಚ್ಚಿ ಹೋದ ಗುರುತು ಪತ್ತೆಯಾಗದ 42 ದೇಹಗಳನ್ನು ಡಿಎನ್ಎ ಪರೀಕ್ಷೆ ಮೂಲಕ ಪತ್ತೆ ಮಾಡಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಈ ನಡುವೆ ಇನ್ನೂ 78 ಮಂದಿ ಸುಳಿವೇ ಇಲ್ಲದಂತಾಗಿದೆ.
ಈ ದುರಂತವೂ ಬೆಳಗಾಗುವಷ್ಟರಲ್ಲಿ ಇಲ್ಲಿನ ಸಂಪೂರ್ಣ ದೃಶ್ಯಗಳನ್ನು ಬದಲಾಯಿಸಿತ್ತು. ತಕ್ಷಣಕ್ಕೆ ದೊಡ್ಡ ಮಟ್ಟದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಸೇನಾ ಪಡೆ ತುರ್ತಾಗಿ ವಯನಾಡುಗೆ ಆಗಮಿಸಿ, ಅವಿರತವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಹಲವು ಜೀವಗಳನ್ನು ಕಾಪಾಡಿತ್ತು. ದುರಂತದಲ್ಲಿ ಕೊಚ್ಚಿಹೋದ ಅನೇಕ ಸಂತ್ರಸ್ತರು ನಿಲಂಬುರ್, ಮಲಪ್ಪುರಂನಲ್ಲಿ ಪತ್ತೆಯಾಯಿತು. ಈ ಮೃತಗಳ ಶರೀರಗಳಿಗೆ ಸಾಮೂಹಿಕ ಅಂತ್ಯಕ್ರಿಯೆ ನಡೆಸುವ ಮೂಲಕ ಶಾಂತಿ ಕೋರಲಾಯಿತು. ಪ್ರವಾಹಕ್ಕೆ ತುತ್ತಾದ ವಯನಾಡಿಗೆ ಮಿಡಿದ ಜನರು ಬೆಂಬಲದ ಮಹಾಪೂರವನ್ನೇ ಹರಿಸಿದರು.