ನವದೆಹಲಿ: ನವದೆಹಲಿಯಲ್ಲಿರುವ ಪ್ರಧಾನಿ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮೈಕ್ರೋಸಾಫ್ಟ್ನ ಸಹ- ಸಂಸ್ಥಾಪಕ ಹಾಗೂ ಸಿಇಒ ಬಿಲ್ ಗೇಟ್ಸ್ ಸುದೀರ್ಘವಾದ ಚರ್ಚೆ ಬಳಿಕ ವಿಶೇಷ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು. ಬಿಲ್ ಗೇಟ್ಸ್ ಪ್ರಧಾನಿ ಮೋದಿ ಅವರಿಗೆ ಪೌಷ್ಠಿಕಾಂಶ ಕುರಿತ ಪುಸ್ತಕವನ್ನು ಉಡುಗೊರೆ ನೀಡಿದ್ದು, ಅದಕ್ಕೆ ಪ್ರತಿಯಾಗಿ ನರೇಂದ್ರ ಮೋದಿ ಅವರು 'ವೋಕಲ್ ಪಾರ್ ಲೋಕಲ್' ಗಿಫ್ಟ್ ಹ್ಯಾಂಪರ್ ಅನ್ನು ಉಡುಗೊರೆಯಾಗಿ ನೀಡಿದರು.
ಬಿಲ್ ಗೇಟ್ಸ್ಗೆ 'ವೋಕಲ್ ಫಾರ್ ಲೋಕಲ್' ಗಿಫ್ಟ್ ಹ್ಯಾಂಪರ್ ನೀಡಿದ ಪ್ರಧಾನಿ ಮೋದಿ ಬಿಲ್ ಗೇಟ್ಸ್ಗೆ ನೀಡಿದ ಗಿಫ್ಟ್ ಹ್ಯಾಂಪರ್ನಲ್ಲಿ ಕಾಶ್ಮೀರದ ಪಶ್ಮಿನಾ ಶಾಲು ಇತ್ತು. ಅದಲ್ಲದೇ ಭಾರತದ ಕೇಸರಿ, ಪ್ರಸಿದ್ಧ ಚಹಾಪುಡಿಗಳಾದ ಡಾರ್ಜಿಲಿಂಗ್ ಹಾಗೂ ನೀಲಗಿರಿ ಚಹಾ, ತೂತುಕುಡಿಯ ಮುತ್ತು ಹಾಗೂ ಟೆರಾಕೋಟಾ ಮೂರ್ತಿ, ಭಾರತದ ರೋಮಾಂಚಕ ಸಂಸ್ಕೃತಿ ಪ್ರತಿನಿಧಿಸುವ ಒಂದು ಚಿಕಣಿ ಕಲಾಕೃತಿಯನ್ನು ಬಿಲ್ ಗೇಟ್ಸ್ ಅವರಿಗೆ ಪ್ರಧಾನಿ ಉಡುಗೊರೆಯಾಗಿ ನೀಡಿದರು.
ಶುಕ್ರವಾರ ಪ್ರಧಾನಿ ಮೋದಿ ಹಾಗೂ ಬಿಲ್ಗೇಟ್ಸ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಯುಪಿಐ ಪಾವತಿ, ತಂತ್ರಜ್ಞಾನ, ಕೋವಿಡ್- 19 ನಂತಹ ವಿಷಯಗಳ ಕುರಿತು ಸುದೀರ್ಘವಾದ ಚರ್ಚೆ ನಡೆಸಿದರು. ಮಾತುಕತೆ ವೇಳೆ ಬಿಲ್ ಗೇಟ್ಸ್ ಭಾರತದ ತಾಂತ್ರಿಕ ಪ್ರಗತಿಯನ್ನು ಶ್ಲಾಘಿಸಿದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆವಿಷ್ಕಾರದಲ್ಲಿ ದೇಶದ ಪ್ರಮುಖ ಪಾತ್ರದ ಬಗ್ಗೆ ಹೊಗಳಿದರು.
ಹಾಗೆಯೇ ನಮೋ ಡ್ರೋನ್ ದೀದಿ ಯೋಜನೆಯ ಬಗ್ಗೆ ಬಿಲ್ ಗೇಟ್ಸ್ ಅವರಿಗೆ ವಿವರಿಸಿದ ಪ್ರಧಾನಿ ಮೋದಿ ದೇಶದಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ತಂತ್ರಜ್ಞಾನವನ್ನು ಉತ್ತೇಜಿಸಲು ಸಹಾಯ ಮಾಡುವ ಕುರಿತು ಹೇಳಿದರು. ಮಹಿಳೆಯರ ಸಬಲೀಕರಣದ ಗುರಿಯನ್ನು ಹೊಂದಿರುವ ಕೇಂದ್ರದ ಉಪಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಬಿಲ್ ಗೇಟ್ಸ್ ಅವರಿಗೆ ವಿವರಿಸಿದರು.
ಇದನ್ನೂ ಓದಿ:ಲೋಕಸಭಾ ಚುನಾವಣಾ ಪ್ರಚಾರ: ಮಂಗಳೂರಿಗೆ ಮೋದಿ, ಶಾ, ಯೋಗಿ ಕರೆತರಲು ಬಿಜೆಪಿ ನಾಯಕರ ಪ್ರಯತ್ನ - LOK SABHA ELECTION 2024