ಕರ್ನಾಟಕ

karnataka

ETV Bharat / bharat

ಛತ್ತೀಸ್​ಗಢದಲ್ಲಿ ಯೋಧ ಸಾವು, ಮಣಿಪುರದಲ್ಲಿ ಫೈರಿಂಗ್, ಉತ್ತರಾಖಂಡದಲ್ಲಿ ಇವಿಎಂ ಒಡೆದು ಹಾಕಿದ ವೃದ್ಧ! - Election Violence - ELECTION VIOLENCE

ಇಂದಿನ ಮೊದಲ ಹಂತದ ಲೋಕಸಭೆ ಚುನಾವಣೆ ವೇಳೆ ಪಶ್ವಿಮ ಬಂಗಾಳ, ಮಣಿಪುರ, ರಾಜಸ್ಥಾನ, ಉತ್ತರಾಖಂಡ, ಛತ್ತೀಸ್​ಗಢದಲ್ಲಿ ಅಹಿತಕರ ಘಟನೆಗಳು ಸಂಭವಿಸಿವೆ. ಇದರ ಸಂಪೂರ್ಣ ವರದಿ ಇಲ್ಲಿದೆ.

ಚುನಾವಣಾ ಹಿಂಸಾಚಾರ
Election Violence

By ETV Bharat Karnataka Team

Published : Apr 19, 2024, 9:05 PM IST

ನವದೆಹಲಿ:ಲೋಕಸಭೆ ಚುನಾವಣೆಗೆ ಇಂದು ನಡೆದು ಮತದಾನದ ವೇಳೆ ವಿವಿಧೆಡೆ ಅಹಿತಕರ ಘಟನೆಗಳು ಹಾಗೂ ಹಿಂಸಾಚಾರ ನಡೆದಿವೆ. ಛತ್ತೀಸ್​ಗಢದಲ್ಲಿ ಓರ್ವ ಯೋಧ ಮೃತಪಟ್ಟರೆ, ಮತ್ತೊಬ್ಬ ಯೋಧ ಗಾಯಗೊಂಡರು. ಮಣಿಪುರದ ಮತದಾನ ಕೇಂದ್ರದಲ್ಲಿ ಗುಂಡಿನ ದಾಳಿ ನಡೆದಿದೆ.

ಛತ್ತೀಸ್​ಗಢ ವರದಿ: ನಕ್ಸಲ್‌ಪೀಡಿತ ಛತ್ತೀಸ್​ಗಢದ ಬಸ್ತಾರ್​ ವಿಭಾಗದಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಬಿಜಾಪುರ ಜಿಲ್ಲೆಯ ಗಲ್ಗಾಮ್ ಪ್ರದೇಶದಲ್ಲಿ ಯುಬಿಜಿಎಲ್ (ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್‌) ಶೆಲ್ ಸ್ಫೋಟದಿಂದ ಯೋಧ ಮೃತಪಟ್ಟರು. ದೇವೇಂದ್ರ ಕುಮಾರ್ ಮೃತರಾಗಿದ್ದು, ಇವರು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಇಂದು ಕರ್ತವ್ಯದ ವೇಳೆಯೇ ಶೆಲ್ ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡಿದ್ದರು. ಬಿಜಾಪುರದಿಂದ ರಾಯ್‌ಪುರಕ್ಕೆ ಮತ್ತು ರಾಯ್‌ಪುರದಿಂದ ದೆಹಲಿಗೆ ಏರ್ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.

ಇದೇ ಬಿಜಾಪುರ ಜಿಲ್ಲೆಯ ಭೈರಾಮ್‌ಗಢದಲ್ಲಿ ಮತ್ತೊಂದು ಘಟನೆಯಲ್ಲಿ ಐಇಡಿ ಸ್ಫೋಟ ಸಂಭವಿಸಿದೆ. ಇದರಿಂದ ಸಿಆರ್‌ಪಿಎಫ್‌ನ ಸಹಾಯಕ ಕಮಾಂಡೆಂಟ್ ಮನು ಹೆಚ್‌.ಸಿ. ಗಾಯಗೊಂಡಿದ್ದಾರೆ. ಪ್ರಥಮ ಚಿಕಿತ್ಸೆಯ ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ರಾಯ್‌ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಹ್ಕಾ ಮತಗಟ್ಟೆ ಬಳಿ ಇವರು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.

ಮಣಿಪುರ ವರದಿ:ಈಶಾನ್ಯ ರಾಜ್ಯ ಮಣಿಪುರ ಸುಮಾರು ಒಂದು ವರ್ಷದಿಂದ ಸಂಘರ್ಷಪೀಡಿತವಾಗಿದೆ. ಶುಕ್ರವಾರ ಚುನಾವಣೆಯ ಸಂದರ್ಭದಲ್ಲೂ ಹಿಂಸಾಚಾರ ನಡೆದಿದೆ. ಮತದಾನ ನಡೆಯುತ್ತಿರುವಾಗಲೇ ಮೊಯಿರಾಂಗ್ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಮತದಾನ ಕೇಂದ್ರದಲ್ಲಿ ಗುಂಡಿನ ದಾಳಿ ನಡೆಯಿತು. ಇದರಿಂದ ಮೂವರು ಗಾಯಗೊಂಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಅಂಗೋಮ್ಚಾ ಬಿಮೋಲ್ ಅಕೋಜಮ್ ಬೆಂಬಲಿಗರು ಮತ್ತು ಬಿಜೆಪಿ ಅಭ್ಯರ್ಥಿ ಬಸಂತ್ ಸಿಂಗ್ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿತ್ತು. ಈ ಸಮಯದಲ್ಲಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಬೇಕಾಯಿತು ಎಂದು ವರದಿಯಾಗಿದೆ. ಅದೇ ರೀತಿ ಇಂಫಾಲ್ ಪೂರ್ವ ಜಿಲ್ಲೆಯ ಥೋಂಗ್ಜು ಬಳಿಯ ಮತದಾನ ಕೇಂದ್ರದಲ್ಲೂ ಅಹಿತರ ಘಟನೆ ಜರುಗಿದೆ. ವಿವಿಧ ಬೂತ್‌ಗಳಲ್ಲಿ ದುಷ್ಕರ್ಮಿಗಳು 4 ಇವಿಎಂಗಳಿಗೆ ಹಾನಿ ಮಾಡಿದ್ದಾರೆ.

ಉತ್ತರಾಖಂಡ ವರದಿ: ಉತ್ತರಾಖಂಡದ ಹರಿದ್ವಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇವಿಎಂ ಯಂತ್ರ ಒಡೆದು ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಜ್ವಾಲಾಪುರ ಕಾಲೇಜಿನ ಮತಗಟ್ಟೆ ಸಂಖ್ಯೆ 126ರಲ್ಲಿ ವೃದ್ಧ ಮತದಾರರೊಬ್ಬರು ಮತದಾನ ಮಾಡಲು ಬಂದಿದ್ದರು. ಮೊದಲಿಗೆ ಸರತಿ ಸಾಲಿನಲ್ಲಿ ಶಾಂತಿಯುತವಾಗಿ ನಿಂತಿದ್ದ ವೃದ್ಧ ಮತ ಚಲಾಯಿಸಲು ಒಳಗೆ ಹೋದ ಕೂಡಲೇ ಮೇಜಿನ ಮೇಲಿದ್ದ ಇವಿಎಂ ಎತ್ತಿಕೊಂಡು ನೆಲಕ್ಕೆಸೆದಿದ್ದಾರೆ. ಇದರಿಂದ ಇವಿಎಂ ಒಡೆದಿದೆ. ವೃದ್ಧ ಮತದಾರನ ಈ ಕೃತ್ಯದಿಂದ ಮತಗಟ್ಟೆಯಲ್ಲಿ ಗೊಂದಲ ಉಂಟಾಯಿತು. ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ನಡೆಸಬೇಕು ಎಂದು ವೃದ್ಧ ಮತದಾರ ಜೋರಾಗಿ ಕೂಗುತ್ತಿದ್ದ. ಈ ವೇಳೆ, ಪೊಲೀಸರು ಆತನನ್ನು ವಶಕ್ಕೆ ಪಡೆದರು.

ಪಶ್ಚಿಮ ಬಂಗಾಳ ವರದಿ: ಪಶ್ಚಿಮ ಬಂಗಾಳದಲ್ಲಿ ಭಾರಿ ಹಿಂಸಾಚಾರ ನಡೆದಿದೆ. ಕೂಚ್ ಬೆಹಾರ್ ಕ್ಷೇತ್ರದಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ಘರ್ಷಣೆಯಿಂದ ಹಲವರು ಗಾಯಗೊಂಡರು. ಟಿಎಂಸಿ ಮತ್ತು ಬಿಜೆಪಿ ಕ್ರಮವಾಗಿ ಸುಮಾರು 100 ಮತ್ತು 50 ದೂರುಗಳನ್ನು ದಾಖಲಿಸಿವೆ. ಮತದಾನದ ವೇಳೆ ಹಿಂಸಾಚಾರ, ಮತದಾರರಿಗೆ ಬೆದರಿಕೆ ಮತ್ತು ಪೋಲ್ ಏಜೆಂಟರ ಮೇಲಿನ ಹಲ್ಲೆಗಳ ಬಗ್ಗೆ ಎರಡೂ ಪಕ್ಷಗಳು ದೂರಿವೆ.

ರಾಜಸ್ಥಾನ ವರದಿ: ರಾಜಸ್ಥಾನದ ಚುರು ಜಿಲ್ಲೆಯಲ್ಲೂ ಹಿಂಸಾತ್ಮಕ ಘಟನೆ ನಡೆದಿದೆ. ಭಲೇರಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರ ರೇಣು ಗ್ರಾಮದಲ್ಲಿ ಕಾಂಗ್ರೆಸ್​ ಪಕ್ಷದ ಮತಗಟ್ಟೆ ಏಜೆಂಟ್ ಮೇಲೆ ದಾಳಿ ಮಾಡಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದ ಕೆಲವರು ನನ್ನನ್ನು ಮತಗಟ್ಟೆಯಿಂದ ಹೊರಹಾಕಿ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹಲ್ಲೆಗೊಳಗಾದ ಅನೂಪ್ ಜಾಖರ್ ಭಲೇರಿ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:ಸುಡು ಬಿಸಿಲು, ವಿಪರೀತ ಸೆಕೆ: ಮತದಾನಕ್ಕೆ ಬಂದ ಮೂವರು ವೃದ್ಧರು ಪ್ರಜ್ಞೆ ತಪ್ಪಿ ಸಾವು - Three People Died In Polling Booth

ABOUT THE AUTHOR

...view details