ಇಂಫಾಲ: ಮಣಿಪುರದಲ್ಲಿ ಉಲ್ಬಣಗೊಂಡ ಎರಡು ಗುಂಪುಗಳ ನಡುವಿನ ಸಶಸ್ತ್ರ ಸಂಘರ್ಷದಿಂದಾಗಿ ಸಾವಿನ ಸಂಖ್ಯೆ 9ಕ್ಕೇರಿದೆ. ಭಾನುವಾರ ತಡರಾತ್ರಿ ಕಂಗ್ಪೊಕಿ ಜಿಲ್ಲೆಯ ಕುಗ್ರಾಮ ತಂಗ್ಬುಹ್ ಎಂಬಲ್ಲಿ ನಡೆದ ಗುಂಡಿನ ದಾಳಿಯಲ್ಲಿ 46 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿದ ಮಹಿಳೆಯನ್ನು ನೆಮ್ಜಾಖೋಲ್ ಲುಂಗ್ಡಿಮ್ ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಗ್ರಾಮದ ಕೆಲವು ಮನೆಗಳ ಸದಸ್ಯರಿಗೆ ಹಿಂಸೆ ನೀಡಲಾಗಿದೆ. ಇದರಿಂದ ರಕ್ಷಣೆ ಪಡೆದುಕೊಳ್ಳಲು ಸ್ಥಳೀಯರು ಅರಣ್ಯದೊಳಗೆ ಪಲಾಯನ ಮಾಡಿದ್ದಾರೆ.
ಎರಡು ಗುಂಪುಗಳ ಜನರು ಪರಸ್ಪರ ಬಾಂಬ್‌ಗಳನ್ನು ಎಸೆದುಕೊಂಡಿದ್ದಾರೆ. ತಡರಾತ್ರಿ ಸಿಆರ್ಪಿಎಫ್ ಸಿಬ್ಬಂದಿಯ ಠಾಣೆಯ ಮೇಲೂ ಕೂಡ ದಾಳಿ ನಡೆದಿದೆ.
ಕಳೆದ ವರ್ಷ ಆರಂಭಗೊಂಡ ಮೈತೇಯಿ ಮತ್ತು ಕುಕೀ ಸಮುದಾಯಗಳ ನಡುವಿನ ಘರ್ಷಣೆಯಿಂದಾಗಿ ಈಗಾಗಲೇ ನೂರಾರು ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ಮನೆ ಕಳೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ:ಇತ್ತೀಚಿಗೆ ಹೆಚ್ಚಾಗಿರುವ ಡ್ರೋನ್ ದಾಳಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಾವಿರಾರು ವಿದ್ಯಾರ್ಥಿಗಳು ಸೋಮವಾರ ಮಣಿಪುರ ವಿಧಾನಸಭಾ ಮತ್ತು ರಾಜಭವನದ ಮುಂದೆ ಪ್ರತಿಭಟನೆ ನಡೆಸಿ, ಪ್ರಾದೇಶಿಕ ಮತ್ತು ಆಡಳಿತ ಸಮಗ್ರತೆ ಕಾಪಾಡುವಂತೆ ಒತ್ತಾಯಿಸಿದ್ದರು.
ಮಣಿಪುರಕ್ಕೆ ಜಯವಾಗಲಿ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು, ಅಸಮರ್ಥ ಶಾಸಕರು ರಾಜೀನಾಮೆ ನೀಡಿ ಆಕ್ರೋಶ ಹೊರಹಾಕಿದರು. ಬಳಿಕ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಮತ್ತು ರಾಜ್ಯಪಾಲ ಎಲ್.ಆಚಾರ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ರಾಜ್ಯಪಾಲರನ್ನು ಭೇಟಿಯಾದ ಬಳಿಕ ಮಾತನಾಡಿದ ವಿದ್ಯಾರ್ಥಿಗಳು, ರಾಜ್ಯದಲ್ಲಿನ ಹಿಂಸಾಚಾರ ತಡೆಗಟ್ಟಲು ವಿಫಲವಾದ ಡಿಜಿಪಿ, ರಾಜ್ಯ ಸರ್ಕಾರದ ಭದ್ರತಾ ಸಲಹೆಗಾರರನ್ನು ಕೂಡಲೇ ತೆಗೆದು ಹಾಕಬೇಕೆಂಬುದೂ ಸೇರಿ 6 ಬೇಡಿಕೆಗಳನ್ನು ನಾವು ಮುಂದಿಟ್ಟಿದ್ದೇವೆ ಎಂದರು.
ಸಿಎಂ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ:ರಾಜ್ಯದಲ್ಲಿ ಉಲ್ಬಣಗೊಂಡಿರುವ ಹಿಂಸಾಚಾರ ತಡೆಗಟ್ಟುವಲ್ಲಿ ಮುಖ್ಯಮಂತ್ರಿ ವಿಫಲವಾಗಿದ್ದು, ಅವರನ್ನು ಕೂಡಲೇ ವಜಾ ಮಾಡಬೇಕು. ಸೂಕ್ಷ್ಮ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ಜವಾಬ್ದಾರಿವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ, ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಮಣಿಪುರ ತನಿಖಾ ಆಯೋಗವು ತನ್ನ ತನಿಖೆ ತ್ವರಿತಗೊಳಿಸಬೇಕು. ಈ ಹಿಂಸಾಚಾರದ ತನಿಖೆಯಲ್ಲಿ ಸಿಬಿಐ, ಎನ್ಐಎ ಮತ್ತು ಇತರೆ ತನಿಖಾ ಸಂಸ್ಥೆಗಳ ದುರ್ಬಳಕೆ ನಡೆಯಬಾರದು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 2,200 ಕೋಟಿ ರೂ. ಟ್ರೇಡಿಂಗ್ ಹಗರಣ: ನಟಿ ಸುಮಿ ಬೋರಾ ಖಾತೆಗೆ 20 ಕೋಟಿ ರೂ. ವರ್ಗಾವಣೆ ಆರೋಪ