ನಾಂದೇಡ್: ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ವಸಂತ ಚವ್ಹಾಣ್ ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಕಳೆದ ಕೆಲವು ದಿನಗಳಿಂದ 69 ವರ್ಷದ ಸಂಸದರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ವಸಂತ್ ಅವರ ಅಂತ್ಯಕ್ರಿಯೆಯನ್ನು ನೈಗಾಂವ್‌ನಲ್ಲಿ ಬೆಳಗ್ಗೆ 11 ಗಂಟೆಗೆ ನೆರವೇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ವಸಂತ ಚವ್ಹಾಣ್ ಅವರು ಬೆಳಿಗ್ಗೆ 4 ಗಂಟೆಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದೊಂದು ವಾರದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮಾಜಿ ಸಿಎಂ ಅಶೋಕ್ ಚವಾಣ್ ಅವರು ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಸೇರಿದರೂ ವಂಸತ್ ಅವರು ಅನಾರೋಗ್ಯದಲ್ಲೂ ಈ ವರ್ಷ ನಾಂದೇಡ್ ಲೋಕಸಭಾ ಸ್ಥಾನವನ್ನು ಗೆದ್ದಿದ್ದರು.
ಲೋಕಸಭಾ ಚುನಾವಣೆಯಲ್ಲಿ, ವಸಂತ ಚವ್ಹಾಣ್ ಅವರು ಹಾಲಿ ಬಿಜೆಪಿ ಸಂಸದ ಪ್ರತಾಪ್ ಪಾಟೀಲ್ ಅವರನ್ನು 59,442 ಮತಗಳಿಂದ ಸೋಲಿಸಿದ್ದರು. ಅಶೋಕ್ ಚವ್ಹಾಣ್ ಚುನಾವಣೆಗೆ ಸ್ವಲ್ಪ ಮೊದಲು ಬಿಜೆಪಿಗೆ ಪಕ್ಷಾಂತರಗೊಂಡ ನಂತರ ದುರ್ಬಲವಾದ ಪಕ್ಷ ಮತ್ತು ಆರೋಗ್ಯ ಸಮಸ್ಯೆಗಳಲ್ಲೂ ಚುನಾವಣೆ ಎದುರಿಸಿ ಗೆದ್ದು ಗಮನ ಸೆಳೆದಿದ್ದರು.