ಭುಜ್ (ಗುಜರಾತ್):ವಂದೇ ಮೆಟ್ರೋವನ್ನು ರೈಲ್ವೆ ಇಲಾಖೆ 'ನಮೋ ಭಾರತ್ ರ‍್ಯಾಪಿಡ್ ರೈಲು' ಎಂದು ಮರುನಾಮಕರಣ ಮಾಡಲಾಗಿದೆ. ಗುಜರಾತ್ನ ಭುಜ್ ಮತ್ತು ಅಹಮದಾಬಾದ್ ನಡುವಿನ ಮೆಟ್ರೋ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹಸಿರು ನಿಶಾನೆ ತೋರಿಸಿದರು.
ಪ್ರಮುಖ ನಗರಗಳ ನಡುವೆ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ನಮೋ ಭಾರತ್ ರ‍್ಯಾಪಿಡ್ ರೈಲು ಹೊಂದಿದೆ. ಭುಜ್‌ನಿಂದ ಅಹಮದಾಬಾದ್‌ಗೆ 359 ಕಿಮೀ ದೂರವನ್ನು 5:45 ಗಂಟೆಗಳಲ್ಲಿ ಕ್ರಮಿಸುತ್ತದೆ. ಒಂಬತ್ತು ನಿಲ್ದಾಣಗಳಲ್ಲಿ ರೈಲು ನಿಲ್ಲುತ್ತದೆ. ಅಂಜಾರ್, ಗಾಂಧಿಧಾಮ್, ಭಚೌ, ಸಮಖಿಯಾಲಿ, ಹಲ್ವಾಡ್, ಧ್ರಂಗಧ್ರ, ವಿರಾಮ್ಗಮ್, ಚಂದ್ಲೋಡಿಯಾ ಮತ್ತು ಸಬರಮತಿ ನಿಲ್ದಾಣಗಳಲ್ಲಿ ಇದು ನಿಲ್ಲಲಿದೆ. ಸೆಪ್ಟೆಂಬರ್ 17 ರಿಂದ ಈ ಮೆಟ್ರೋ ಸೇವೆ ಲಭ್ಯವಾಗಲಿದೆ. ಒಟ್ಟು ಪ್ರಯಾಣ ದರ 455 ರೂಪಾಯಿ ಆಗಿದೆ.
ವಂದೇ ಮೆಟ್ರೋವನ್ನು ನಮೋ ಭಾರತ್ ರ‍್ಯಾಪಿಡ್ ರೈಲ್ ಎಂದು ಮರುನಾಮಕರಣ ಮಾಡಲು ಸಚಿವಾಲಯ ನಿರ್ಧರಿಸಿದೆ. ಇತರ ಮೆಟ್ರೋಗಳು ಕಡಿಮೆ ದೂರ ಕ್ರಮಿಸಿದರೆ, ನಮೋ ಭಾರತ್ ರೈಲುಗಳು ಅಹಮದಾಬಾದ್‌ನ ಹೃದಯಭಾಗವನ್ನು ಅದರ ಬಾಹ್ಯ ನಗರಗಳೊಂದಿಗೆ ಸಂಪರ್ಕಿಸುತ್ತದೆ ಎಂದು ರೈಲ್ವೆ ವಕ್ತಾರರು ಸೋಮವಾರ ತಿಳಿಸಿದ್ದಾರೆ.