ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲೇ, ಆಮ್ ಆದ್ಮಿ ಪಕ್ಷದಲ್ಲಿ ರಾಜೀನಾಮೆಗಳ ಪರ್ವ ಶುರುವಾಗಿದೆ. ಶುಕ್ರವಾರ (ಜ.31) ಒಂದೇ ದಿನ ಪಕ್ಷದ 7 ಹಾಲಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಮತದಾನಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಇರುವಾಗಲೇ ಈ ಸರಣಿ ರಾಜೀನಾಮೆಗಳ ಪರ್ವ ನಡೆದಿದೆ.
ಮುಂಬರುವ ಚುನಾವಣೆಗೆ ಟಿಕೆಟ್ ನಿರಾಕರಣೆ ಮಾಡಿದ್ದರಿಂದ ನಿರಾಶೆಗೊಂಡು ಏಳು ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
Aam Aadmi Party MLA from Bijwasan Bhupinder Singh Joon and MLA from Adarsh Nagar Pawan Kumar Sharma resigned from the party
— ANI (@ANI) January 31, 2025
The party did not give tickets to them this time. #DelhiElection2025 https://t.co/uwLTDWZPDB pic.twitter.com/UeEKV5P1B9
ರಾಜೀನಾಮೆ ನೀಡಿದ ಶಾಸಕರು:
- ಭಾವನಾ ಗೌರ್ - ಪಾಲಂ ಕ್ಷೇತ್ರ
- ಬಿಎಸ್ ಜೂನ್ - ಬಿಜ್ವಾಸನ್ ಕ್ಷೇತ್ರ
- ಪವನ್ ಶರ್ಮಾ - ಆದರ್ಶ ನಗರ ಕ್ಷೇತ್ರ
- ಮದನ್ ಲಾಲ್ - ಕಸ್ತೂರಬಾ ನಗರ ಕ್ಷೇತ್ರ
- ರಾಜೇಶ್ ರಿಷಿ - ಜನಕಪುರಿ ಕ್ಷೇತ್ರ
- ರೋಹಿತ್ ಮೆಹ್ರಾಲಿಯಾ - ತ್ರಿಲೋಕಪುರಿ ಕ್ಷೇತ್ರ
- ನರೇಶ್ ಯಾದವ್ - ಮೆಹ್ರೌಲಿ ಕ್ಷೇತ್ರ
ರಾಜೀನಾಮೆಗೆ ಕಾರಣ: ಅವರು ಪಕ್ಷದ ರಾಷ್ಟ್ರೀಯ ಸಂಚಾಲಕ, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಎರಡು ಪುಟಗಳ ಪತ್ರ ಬರೆದಿದ್ದು, ಅದರಲ್ಲಿ ತಮ್ಮ ರಾಜೀನಾಮೆಗೆ ಕಾರಣಗಳನ್ನು ಸಹ ಉಲ್ಲೇಖಿಸಿದ್ದಾರೆ.
''ಭಾರತೀಯ ರಾಜಕೀಯವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಅಣ್ಣಾ ಹಜಾರೆ ನಡೆಸಿದ ಭ್ರಷ್ಟಾಚಾರದ ವಿರುದ್ಧದ ಚಳುವಳಿಯಿಂದ ಆಮ್ ಆದ್ಮಿ ಪಕ್ಷ ಹುಟ್ಟಿಕೊಂಡಿತು. ಆದರೆ, ಈಗ ಆಮ್ ಆದ್ಮಿ ಪಕ್ಷವೇ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿಕೊಂಡಿದೆ. ನಾನು ಪ್ರಾಮಾಣಿಕತೆಯ ರಾಜಕೀಯಕ್ಕಾಗಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದೆ. ಆದರೆ, ಇಂದು ಪ್ರಾಮಾಣಿಕತೆ ಎಲ್ಲಿಯೂ ಕಾಣುತ್ತಿಲ್ಲ'' ಎಂದು ಮೆಹ್ರೌಲಿ ವಿಧಾನಸಭಾ ಕ್ಷೇತ್ರದ ಶಾಸಕ ನರೇಶ್ ಯಾದವ್ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ನಾನು ಈವರೆಗೂ ಪ್ರಾಮಾಣಿಕತೆಯಿಂದ ರಾಜಕೀಯ ಮಾಡಿದ್ದೇನೆ. ನನ್ನ ಕೆಲಸದ ಬಗ್ಗೆ ಮೆಹ್ರೌಲಿ ಕ್ಷೇತ್ರದ ಜನರಿಗೂ ಗೊತ್ತು. ಆದರೆ, ಪಕ್ಷದ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಪಕ್ಷದ ಎಲ್ಲಾ ಹುದ್ದೆಗಳಿಗೆ ನಾನು ರಾಜೀನಾಮೆ ನೀಡಬೇಕಾಯಿತು. ಆದರೂ, ಪ್ರಾಮಾಣಿಕತೆಯಿಂದ ರಾಜಕೀಯ ಮಾಡುವ ಆಮ್ ಆದ್ಮಿ ಪಕ್ಷದಲ್ಲಿರುವವರೊಂದಿಗೆ ನಾನು ಸ್ನೇಹದಿಂದ ಮುಂದುವರಿಯುತ್ತೇನೆ ಎಂದು ನರೇಶ್ ಯಾದವ್ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಆರಂಭಿಕ ಪಟ್ಟಿಯಲ್ಲಿ ನರೇಶ್ ಯಾದವ್ ಅವರ ಹೆಸರನ್ನು ಸೇರಿಸಲಾಗಿತ್ತು. ಆದರೆ, ನಂತರ ಕೆಲವು ಕಾರಣಗಳನ್ನು ನೀಡಿ ಅವರ ಟಿಕೆಟ್ ಅನ್ನು ಹಿಂಪಡೆಯಲಾಗಿತ್ತು. ಅವರು ಸ್ಪರ್ಧೆ ಮಾಡುವ ಮೆಹ್ರೌಲಿ ವಿಧಾನಸಭಾ ಸ್ಥಾನಕ್ಕೆ ಮಹೇಂದ್ರ ಚೌಧರಿ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಆಪ್ ಯೋಜನೆಗಳಿಂದ ದೆಹಲಿಯ ಪ್ರತಿ ಕುಟುಂಬಕ್ಕೆ ಮಾಸಿಕ 25 ಸಾವಿರ ರೂ. ಉಳಿತಾಯ: ಕೇಜ್ರಿವಾಲ್ - DELHI ELECTIONS 2025