ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈಲು ಸೇವೆಯನ್ನು ಮತ್ತಷ್ಟು ಸುಗಮಗೊಳಿಸಲು ವಂದೇ ಭಾರತ್ ರೈಲುಗಳನ್ನು ಪರಿಚಯಿಸಿತ್ತು. ಎಸಿ ಚೇರ್ಗಳನ್ನು ಹೊಂದಿರುವ ಈ ರೈಲು ಇದೀಗ ಸ್ಲೀಪರ್ ಕೋಚ್ಗಳನ್ನೂ ಪಡೆಯಲಿದೆ. ಶೀಘ್ರದಲ್ಲೇ ಎಲ್ಲ ವಂದೇ ರೈಲುಗಳು ಸ್ಲೀಪರ್ ಕೋಚ್ ಅನ್ನು ಅಳವಡಿಸಿಕೊಳ್ಳಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಹೀಗಾಗಿ ವಂದೇ ಭಾರತ ಪ್ರಯಾಣಿಕರಲ್ಲಿ ಕುತೂಹಲ ಗರಿಗೆದರಿದೆ.
ಮೊದಲ ಸ್ಲೀಪರ್ ಕೋಚ್ ವಂದೇ ಭಾರತ್ ರೈಲು ಮುಂಬೈ ಮತ್ತು ಭೋಪಾಲ್ ಮಧ್ಯೆ ಶೀಘ್ರದಲ್ಲೇ ಸಂಚಾರ ನಡೆಸಲಿದೆ. ಪ್ರತಿ ರೈಲಿನಲ್ಲಿ 10 ಸ್ಲೀಪರ್ ಬೋಗಿಗಳನ್ನು ಹೊಂದಲಿವೆ. ಯಾವ ಮಾರ್ಗದಲ್ಲಿ ರೈಲುಗಳಲ್ಲಿ ಈ ಸೇವೆ ಇದೆ ಎಂಬುದರ ಬಗ್ಗೆಯೂ ಸರ್ಕಾರ ಮಾಹಿತಿ ಹಂಚಿಕೊಂಡಿದೆ. ಮಧ್ಯಪ್ರದೇಶದ ವಂದೇ ಭಾರತ್ ರೈಲು ಮೊದಲ ಸ್ಲೀಪರ್ ಸಂಚಾರ ನಡೆಸಲಿದೆ. ಭೋಪಾಲ್‌ನಿಂದ ಮುಂಬೈ ಸಂಪರ್ಕಿಸುವ ರೈಲಿನಲ್ಲಿ ಈ ಸೇವೆ ಇರಲಿದೆ. ಇದು 822 ಕಿಲೋಮೀಟರ್ ದೂರವನ್ನು ಸುಮಾರು 8 ಗಂಟೆಗಳಲ್ಲಿ ಕ್ರಮಿಸಲಿದೆ.
ಈ ಮಾರ್ಗದ ವಂದೇ ಭಾರತ್ ಸ್ಲೀಪರ್‌ನ ಪ್ರಾಯೋಗಿಕ ಸಂಚಾರವನ್ನು ಜನರು ಶೀಘ್ರದಲ್ಲೇ ಪಡೆಯಲಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ಜನನಿಬಿಡ ಮಾರ್ಗವಾಗಿರುವುದರಿಂದ ಸ್ಲೀಪರ್ ಕೋಚ್ ವ್ಯವಸ್ಥೆ ನೀಡುವಂತೆ ಸಾರ್ವಜನಿಕರು ಬೇಡಿಕೆ ಇಟ್ಟಿದ್ದರು. ಇದನ್ನು ಪರಿಗಣಿಸಿರುವ ಸರ್ಕಾರ ಮತ್ತು ರೈಲ್ವೆ ಇಲಾಖೆ ಈ ಮಾರ್ಗ ಸೇರಿದಂತೆ ವಿವಿಧ ರೈಲುಗಳಲ್ಲಿ ಇನ್ನು ಮುಂದೆ ಸ್ಲೀಪರ್ ಸೇವೆಯನ್ನೂ ನೀಡಲು ಮುಂದಾಗಿದೆ.