ಹಲ್ದ್ವಾನಿ (ಉತ್ತರಾಖಂಡ): ಹಿಂಸಾಚಾರಕ್ಕೆ ತುತ್ತಾಗಿದ್ದ ಉತ್ತಾರಖಂಡದ ಹಲ್ದ್ವಾನಿ ಪಟ್ಟಣ ಶಾಂತಗೊಂಡಿರುವ ಹಿನ್ನೆಲೆ, ಸುತ್ತಮುತ್ತ ಪ್ರದೇಶಗಳಲ್ಲಿ ಜಾರಿಗೊಳಿಸಿದ್ದ ಕರ್ಫ್ಯೂ ಅನ್ನು ಇಂದು ತೆಗೆದುಹಾಕಲಾಗಿದೆ. ಆದರೆ, ಗುರುವಾರ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಬಂಭೂಲ್ಪುರ ಪ್ರದೇಶದಲ್ಲಿ ಮಾತ್ರ ಕರ್ಫ್ಯೂ ಜಾರಿಯಲ್ಲಿದೆ. ಪಟ್ಟಣದ ಹೊರವಲಯದಲ್ಲಿರುವ ಅಂಗಡಿಗಳು ಶನಿವಾರ ತೆರೆದಿದ್ದರೂ, ಶಾಲೆಗಳು ಮುಚ್ಚಿದ್ದವು.
ಫೆಬ್ರವರಿ 8 ರಂದು ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ಎಂಬಲ್ಲಿ ಅಕ್ರಮವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡ ತೆರವು ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಧಾರ್ಮಿಕ ಕಟ್ಟಡ ಕೆಡವಿರುವುದನ್ನು ವಿರೋಧಿಸಿ, ಜನರ ಗುಂಪೊಂದು ಪೊಲೀಸ್ ವಾಹನ ಸೇರಿದಂತೆ ಸಮಾರು 100 ವಾಹನಗಳಿಗೆ ಬೆಂಕಿ ಹಚ್ಚಿ ಹಿಂಸಾಚಾರ ಭುಗಿಲೆದ್ದಿತ್ತು. ಪೊಲೀಸರು, ಪತ್ರಕರ್ತರು ಹಾಗೂ ಜನಸಾಮಾನ್ಯರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಗುಂಡು ಹಾರಿಸಿದ್ದರು. ಈ ಹಿಂಸಾಚಾರದ ಭರಾಟೆಯಲ್ಲಿ ಐದು ಮಂದಿ ಪ್ರಾಣ ಕಳೆದುಕೊಂಡರೆ, ಸುಮಾರು 300 ಮಂದಿ ಗಾಯಗೊಂಡಿದ್ದರು. ಹೀಗಾಗಿ ಹಲ್ದ್ವಾನಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶಾಲೆಗಳಿಗೆ ರಜೆ ಘೋಷಿಸುವುದರ ಜೊತೆಗೆ, ಕರ್ಫ್ಯೂ ಕೂಡ ಜಾರಿ ಮಾಡಲಾಗಿತ್ತು.
ಹಲ್ದ್ವಾನಿಯಿಂದ ಕರ್ಫ್ಯೂ ತೆರವು: ಮಾಧ್ಯಮಗಳ ಜೊತೆಗೆ ಮಾತನಾಡಿದ ಉತ್ತರಾಖಂಡದ ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಎ.ಪಿ. ಅಂಶುಮಾನ್, "ಹಲ್ದ್ವಾನಿಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು, ಕರ್ಫ್ಯೂ ಹಿಂತೆಗೆದುಕೊಳ್ಳಲಾಗಿದೆ. ಬಂಭೂಲ್ಪುರದಲ್ಲಿ ಕರ್ಫ್ಯೂ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಎಫ್ಐಆರ್ಗಳನ್ನು ದಾಖಲಿಸಲಾಗಿದ್ದು, ಐದು ಜನರನ್ನು ಬಂಧಿಸಲಾಗಿದೆ. ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಘಟನೆಯಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅನೇಕ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಬಾಧಿತ ಪ್ರದೇಶದಲ್ಲಿ ಪೊಲೀಸ್ ತಂಡ ನಿರಂತರವಾಗಿ ಗಸ್ತು ನಡೆಸುತ್ತಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿರಿಸಲಾಗಿದೆ." ಎಂದು ತಿಳಿಸಿದ್ದಾರೆ.