ರುದ್ರಪುರ (ಉತ್ತರಾಖಂಡ್): ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ನ ಅಧಿಕಾರಿಯೊಬ್ಬರ ಶವವು ನೇಣು ಬಿಗಿದುಕೊಂಡಿರುವ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉತ್ತರಾಖಂಡ್ನ ಉಧಮ್ಸಿಂಗ್ ನಗರ ಜಿಲ್ಲೆಯಲ್ಲಿ ನಡೆದಿದೆ. ವಿಮಾನ ನಿಲ್ದಾಣದ ಆವರಣದ ಕೊಠಡಿಯಲ್ಲೇ ಮಹಿಳೆಯ ದಿರಿಸಿನಲ್ಲಿ ಈ ಅಧಿಕಾರಿಯ ಮೃತದೇಹ ದೊರೆತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
''ಸೋಮವಾರ ಕೊಠಡಿಯಲ್ಲಿ ಫ್ಯಾನ್ಗೆ ನೇಣಿ ಬಿಗಿದುಕೊಂಡ ಸ್ಥಿತಿಯಲ್ಲಿ ಎಟಿಸಿ ಅಧಿಕಾರಿಯ ಮೃತದೇಹ ಪತ್ತೆಯಾಗಿದೆ. ಮಹಿಳೆಯ ಉಡುಪು ಧರಿಸಲಾಗಿದ್ದು, ಹಣೆಗೆ ಕುಂಕುಮ, ತುಟಿಗೆ ಲಿಪ್ಸ್ಟಿಕ್ ಹಚ್ಚಲಾಗಿದೆ. ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡುಬಂದಿದೆ. ಆದರೆ, ಸ್ಥಳದಲ್ಲಿ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ'' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕತ್ಯಾಲ್ ಮಾಹಿತಿ ನೀಡಿದ್ದಾರೆ.
''ಭಾನುವಾರ ರಾತ್ರಿ ತಮ್ಮ ಕೊಠಡಿ ಮರಳುವ ಮುನ್ನ ಮೃತ ಅಧಿಕಾರಿಯು ತಮ್ಮ ಓರ್ವ ಸ್ನೇಹಿತ ಹಾಗೂ ಸಂಬಂಧಿಕರೊಬ್ಬರೊಂದಿಗೆ ಊಟ ಮಾಡಿದ್ದರು. ಸೋಮವಾರ ಕರ್ತವ್ಯಕ್ಕೆ ಬಾರದೆ ಇದ್ದಾಗ ಅವರನ್ನು ಸಂಪರ್ಕಿಸಲು ಸಿಬ್ಬಂದಿ ಪ್ರಯತ್ನಿಸಿದ್ದರು. ಆದರೆ, ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಸಿಬ್ಬಂದಿ ಕೋಣೆ ಹತ್ತಿರ ತೆರಳಿದ್ದರು. ಆಗ ಕೊಠಡಿಗೆ ಒಳಗಡೆಯಿಂದ ಬಾಗಿಲು ಹಾಕಿದ್ದು ಪತ್ತೆಯಾಗಿದೆ. ಇದರಿಂದ ಅದನ್ನು ಮುರಿದು ಒಳಗಡೆ ಹೋಗಿ ನೀಡಿದಾಗ ಮಹಿಳಾ ಬಟ್ಟೆ ಧರಿಸಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ'' ಎಂದು ಅವರು ವಿವರಿಸಿದರು.
ಮುಂದುವರೆದು, ''ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಮೃತ ಅಧಿಕಾರಿಯು ಪಿಥೋರ್ಗಢದ ಜಿಲ್ಲೆಯವರಾಗಿದ್ದು, ಎಟಿಸಿಯಲ್ಲಿ ಸಹಾಯಕ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಪತ್ನಿ ಪಿಥೋರ್ಗಢದಲ್ಲೇ ಶಿಕ್ಷಕಿಯಾಗಿದ್ದಾರೆ. ಈ ದಂಪತಿಗೆ ಎರಡೂವರೆ ವರ್ಷದ ಮಗಳು ಇದ್ದಾಳೆ. ಅಧಿಕಾರಿಯ ಸಾವಿಗೆ ನಿಖರ ಕಾರಣ ತಿಳಿದಿಲ್ಲ. ಸದ್ಯ ಅವರ ಮೊಬೈಲ್ ಫೋನ್ ಪರಿಶೀಲನೆ ಮಾಡಲಾಗುತ್ತಿದೆ'' ಎಂದು ಎಸ್ಪಿ ಹೇಳಿದರು.
ಇದನ್ನೂ ಓದಿ:ವ್ಯಕ್ತಿಯ ಅಂತ್ಯಕ್ರಿಯೆಗೆ ನಡೆದಿತ್ತು ತಯಾರಿ; 'ನಾನು ಸತ್ತಿಲ್ಲ ಬದುಕಿದ್ದೇನೆ' ಅಂತಾ ಬಂತು ಫೋನ್ ಕರೆ!