ಫಾರೂಕಾಬಾದ್(ಉತ್ತರ ಪ್ರದೇಶ):ಮಾರುಕಟ್ಟೆಯಲ್ಲಿ ಮಿರಿಮಿರಿ ಮಿಂಚುವ ಹೊಸ ಎಲೆಕ್ಟ್ರಿಕ್ ಬೈಕ್ಗಳನ್ನು ಕಂಡಾಗ ಅದನ್ನು ಖರೀದಿಸಲು, ಹಳೆಯ ಬೈಕ್ಗಳನ್ನು ಗುಜರಿಗೋ ಅಥವಾ ಕಡಿಮೆ ದರಕ್ಕೋ ಮಾರಾಟ ಮಾಡುತ್ತೇವೆ. ಆದರೆ, ಇಲ್ಲೊಬ್ಬ ಮೆಕ್ಯಾನಿಕ್ ತನ್ನ ಪೆಟ್ರೋಲ್ಚಾಲಿತ ಹಳೆಯ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕಾಗಿ ಮಾರ್ಪಡಿಸಿದ್ದಾರೆ. ಕೇವಲ 9 ರೂಪಾಯಿ ವೆಚ್ಚದಲ್ಲಿ 50 ಕಿ.ಮೀ ಓಡುವಂತೆ ವಿನ್ಯಾಸ ಮಾಡಿದ್ದಾರೆ.
ಉತ್ತರ ಪ್ರದೇಶದ ಫಾರೂಕಾಬಾದ್ನ ಮೆಕ್ಯಾನಿಕ್ ಶ್ರೀಕಾಂತ್ ತಮ್ಮ ಕೈಚಳಕದಿಂದ ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ರೂಪಾಂತರಿಸಿದ್ದಾರೆ. ವಿಪರೀತ ಹೊಗೆ ಉಗುಳುತ್ತಿದ್ದ ಪೆಟ್ರೋಲ್ಚಾಲಿತ ಬೈಕ್ ಅನ್ನು ಈಗ ಸದ್ದಿಲ್ಲದ ಎಲೆಕ್ಟ್ರಿಕ್ ಮಾದರಿಗೆ ತಂದಿದ್ದಾರೆ. ಇದರಿಂದ ಆತನಿಗೆ ಖರ್ಚೂ ಕಡಿಮೆ ಆಗುತ್ತಿದೆಯಂತೆ.
ಇವಿಗೆ ಬದಲಾದ ಹಳೆಯ ಪೆಟ್ರೋಲ್ ಬೈಕ್ (ETV Bharat) ಮಾಲಿನ್ಯ ತಡೆಯಲು ಪರಿವರ್ತನೆ:ತನ್ನಲ್ಲಿದ್ದ 16 ವರ್ಷಗಳ ಹಳೆಯ ಬೈಕ್ ವಿಪರೀತ ಹೊಗೆ ಉಗುಳುತ್ತಿತ್ತು. ಇದರಿಂದ ಪರಿಸರಕ್ಕಾಗುವ ಹಾನಿ ಬಗ್ಗೆ ಬೇಸರಗೊಂಡಿದ್ದಾರೆ. ಪರಿಸರಕ್ಕೆ ಹಾನಿಯಾಗದಂತೆ ಬೈಕ್ ಬದಲಿಸುವ ಬಗ್ಗೆ ಯೋಚನೆ ಮಾಡಿದ್ದಾರೆ. ಕೆಲ ಮೆಕ್ಯಾನಿಕ್ಗಳ ಸಲಹೆಯನ್ನು ಪಡೆದು, ಎಲೆಕ್ಟ್ರಿಕ್ ವೆಹಿಕಲ್ ಆಗಿ ಮಾರ್ಪಡಿಸಲು ತಯಾರಿ ನಡೆಸಿದ್ದಾರೆ.
ಇದಕ್ಕಾಗಿ 35 ಸಾವಿರ ರೂಪಾಯಿ ಖರ್ಚು ಮಾಡಿ ಕೆಲ ಬಿಡಿ ಭಾಗಗಳನ್ನು ಆನ್ಲೈನ್ ಮೂಲಕ ಖರೀದಿಸಿದ್ದಾರೆ. ಇನ್ನೊಂದಷ್ಟು ಹಳೆಯ ವಸ್ತುಗಳನ್ನೇ ಅಳವಡಿಸಿದ್ದಾರೆ. 15 ದಿನದಲ್ಲಿ ಕಷ್ಟಪಟ್ಟು ಪೆಟ್ರೋಲ್ಚಾಲಿತ ಬೈಕ್ ಅನ್ನು ಎಲೆಕ್ಟ್ರಿಕ್ ವೆಹಿಕಲ್ ಆಗಿ ಮಾರ್ಪಡಿಸಿದ್ದಾರೆ.
ಇದೀಗ ಗಾಡಿಯು ಥೇಟ್ ಎಲೆಕ್ಟ್ರಿಕ್ ವೆಹಿಕಲ್ನಂತೆ ಕಾಣುತ್ತಿದೆ. ಗಾಡಿಗಿದ್ದ ಚೈನ್ ಅನ್ನೂ ಕಿತ್ತು ಹಾಕಲಾಗಿದೆ. ಪೆಟ್ರೋಲ್ ಎಂಜಿನ್ ತೆಗೆದು ಅದರ ಜಾಗದಲ್ಲಿ 60 ವೋಲ್ಟ್ ಬ್ಯಾಟರಿ ಅಳವಡಿಸಿದ್ದಾರೆ. ಬೈಕ್ ಇದೀಗ ಕೇವಲ 9 ರೂಪಾಯಿ ವೆಚ್ಚದಲ್ಲಿ 50 ಕಿಲೋಮೀಟರ್ ಓಡುತ್ತದೆಯಂತೆ.
ರೂಪಾಂತರಿ ಬೈಕ್ ಜೊತೆ ಮೆಕ್ಯಾನಿಕ್ ಶ್ರೀಕಾಂತ್ (ETV Bharat) ಒಂದೂವರೆ ಯೂನಿಟ್ನಲ್ಲಿ ಫುಲ್ ಚಾರ್ಜ್:ಈ ಬಗ್ಗೆ ಮಾಹಿತಿ ಹಂಚಿಕೊಂಡ ಮೆಕ್ಯಾನಿಕ್ ಶ್ರೀಕಾಂತ್, "ಇದನ್ನು ತಯಾರಿಸಲು 35 ಸಾವಿರ ರೂಪಾಯಿ ಖರ್ಚು ಮಾಡಿದೆ. ಒಮ್ಮೆ ಚಾರ್ಜ್ ಮಾಡಿದರೆ ಒಂದೂವರೆ ಯೂನಿಟ್ ವಿದ್ಯುತ್ ಖರ್ಚಾಗುತ್ತದೆ. ಅಂದರೆ ಸುಮಾರು 9 ರೂಪಾಯಿ. ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಗಂಟೆಗೆ 50 ಕಿ.ಮೀ ವೇಗದಲ್ಲಿ 50 ಕಿ.ಮೀ ದೂರ ಸಾಗಬಹುದು. 108 ರೂಪಾಯಿ ಬೆಲೆಯ ಲೀಟರ್ ಪೆಟ್ರೋಲ್ನಿಂದ 50ರಿಂದ 60 ಕಿ.ಮೀ ದೂರ ಚಲಾಯಿಸಬಹುದು. ಇದಕ್ಕೆ ಹೋಲಿಸಿದರೆ, ವೆಚ್ಚವೂ ತುಂಬಾ ಕಡಿಮೆ ಆಗಿದೆ" ಎಂದು ತಿಳಿಸಿದರು.
"ಓವರ್ ಲೋಡ್ ಹಾಕಿದರೂ ಬೈಕ್ಗೆ ಹಾನಿಯಾಗಲ್ಲ. ಸಾಮಾನು-ಸರಂಜಾಮು ಜೊತೆಗೆ ಇಬ್ಬರು ಆರಾಮವಾಗಿ ಕೂತು ಪ್ರಯಾಣ ಮಾಡಬಹುದು. ಹೊಸ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಬೈಕ್ಗಳ ಬೆಲೆ ಹೆಚ್ಚು. ಖರೀದಿಸಲಾಗದವರು ಹಳೆಯ ವಾಹನವನ್ನೇ ಈ ರೀತಿಯಲ್ಲಿ ಸುಲಭವಾಗಿ ಮಾರ್ಪಡಿಸಿಕೊಳ್ಳಬಹುದು. ಇದರಿಂದ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ತಡೆಯಬಹುದು" ಎಂದು ಅವರು ಹೇಳಿದರು.
ಇದನ್ನೂ ಓದಿ:ಚೀನಾ-ಭಾರತ ನಡುವೆ ಮಹತ್ವದ ಬೆಳವಣಿಗೆ: ಪೂರ್ವ ಲಡಾಖ್ನ LAC ಉದ್ದಕ್ಕೂ ಸೇನಾ ಗಸ್ತಿಗೆ ಒಪ್ಪಂದ