ಝಾನ್ಸಿ: ಈ ದುನಿಯಾದಲ್ಲಿ ಎಲ್ಲದರ ಬೆಲೆಯೂ ದುಬಾರಿಯೇ ಸರಿ. ಸಣ್ಣ ವಸ್ತುವಿಗೂ ಹಿಂದಿನದ್ದಕ್ಕಿಂತ ದುಪ್ಪಟ್ಟು ಬೆಲೆ ನೀಡಬೇಕಿದೆ. ಇಂತಿಪ್ಪ ಮಧ್ಯಮವರ್ಗ ಮತ್ತು ಬಡಕುಟುಂಬಗಳಿಗೆ ಆರ್ಥಿಕ ಹೊರೆ ಹೆಚ್ಚುತ್ತಿದೆ. ಅದರಲ್ಲೂ ಯಾವುದಾದರೂ ಕಾರ್ಯಕ್ರಮ ಬಂತೆಂದರೆ ಜೇಬು ಖಾಲಿಯಾಗುವುದು ಪಕ್ಕಾ.
ಜನರು ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ಕೂಡಿಟ್ಟುಕೊಂಡ ಅಷ್ಟಿಷ್ಟು ಹಣವೂ ವ್ಯಯವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದು ಬೇಡ ಎಂದು ಅರಿತ ಉತ್ತಪ್ರದೇಶದ ಯಾದವ ಸಮುದಾಯವು ಒಂದು ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಸಮುದಾಯದ ಯಾವುದೇ ಕುಟುಂಬದಲ್ಲಿ ಯಾರಾದರೂ ಸಾವನ್ನಪ್ಪಿದ್ದ ಬಳಿಕ 13ನೇ ದಿನ ನಡೆಸುವ ತಿಥಿ ಕಾರ್ಯಕ್ರಮವನ್ನು ಇನ್ನು ಮುಂದೆ ನಡೆಸದಂತೆ ಸೂಚಿಸಲಾಗಿದೆ.
ಝಾನ್ಸಿ ಜಿಲ್ಲೆಯ ಯಾದವ ಸಮುದಾಯದ ಮುಖಂಡರು ಒಗ್ಗೂಡಿ ಇಂಥದ್ದೊಂದು ಸುಗ್ರೀವಾಜ್ಞೆ ಹೊರಡಿಸಿದ್ದಾರೆ. ತಿಥಿ ಸಮಾರಂಭ ಆಯೋಜಿಸುವ, ಆಮಂತ್ರಣ ಪತ್ರಿಕೆ ಮುದ್ರಿಸುವುದನ್ನು ಸಹ ನಿಷೇಧಿಸಲಾಗಿದೆ.
ದುಂದುವೆಚ್ಚಕ್ಕೆ ಕಡಿವಾಣ: ಇಂದಿನಿಂದ ಯಾದವ ಸಮಾಜದ ಎಲ್ಲ ಜನರಿಗೂ ಈ ನಿಯಮ ಅನ್ವಯವಾಗಲಿದೆ. ಯಾರಾದರೂ ನಿಯಮ ಉಲ್ಲಂಘಿಸಿದರೆ ಸಾಮಾಜಿಕ ಬಹಿಷ್ಕಾರ ಹಾಕಲಾಗುವುದು. ಇಂತಹ ದುಂದುವೆಚ್ಚದ ವಿರುದ್ಧ ಇತರ ಸಮುದಾಯಗಳ ಜನರು ಅಭಿಯಾನ ನಡೆಸುವಂತೆ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ.
ಮುಖಂಡ ರಘುವೀರ್ ಸಿಂಗ್ ಯಾದವ್ ಮಾತನಾಡಿ, ಯಾರಾದರೂ ಮೃತಪಟ್ಟಲ್ಲಿ ಆ ಕುಟುಂಬಕ್ಕೆ ತೀವ್ರ ದುಃಖವಾಗುತ್ತದೆ. ಹಳೆಯ ಸಂಪ್ರದಾಯದಂತೆ, ನೋವಿನಲ್ಲೂ ತಿಥಿ ಊಟ ನಡೆಸಲಾಗುತ್ತದೆ. ಇದು ಅವರ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಪದ್ಧತಿಯಿಂದ ಅನೇಕ ಕುಟುಂಬಗಳು ಸಾಲದ ಸುಳಿಯಲ್ಲಿ ಸಿಲುಕಿ ನರಳುತ್ತಿವೆ ಎಂದರು.
ಬದಲಾಗಿ, ಅಗಲಿದವರ ಆತ್ಮ ಶಾಂತಿಗಾಗಿ ಬ್ರಾಹ್ಮಣ ಮತ್ತು ಕನ್ಯೆಯರಿಗೆ ಭೋಜನ ಆಯೋಜಿಸಲು ಸಲಹೆ ನೀಡಿದರು. ಸಭೆಯಲ್ಲಿ ಹಾಜರಿದ್ದವರು ಈ ಪ್ರಸ್ತಾಪವನ್ನು ಸರ್ವಾನುಮತದಿಂದ ಬೆಂಬಲಿಸಿದರು. ಎಲ್ಲಾ ಯಾದವ ಸಮುದಾಯದ ಸದಸ್ಯರು ಇಂತಹ ಕಾರ್ಯಕ್ರಮಗಳನ್ನು ನಡೆಸುವುದನ್ನು ನಿಲ್ಲಿಸಬೇಕೆಂದು ಸುಗ್ರೀವಾಜ್ಞೆ ಹೊರಡಿಸಿದರು.
ಈ ಪದ್ಧತಿಯನ್ನು ಈಗಾಗಲೇ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಅನೇಕ ನಗರಗಳು ಮತ್ತು ಹಳ್ಳಿಗಳಲ್ಲಿ ನಿಲ್ಲಿಸಲಾಗಿದೆ.
ಇದನ್ನೂ ಓದಿ: ವರ್ಲ್ಡ್ ಫೇಮಸ್ ಹೈದರಾಬಾದ್ ಬಿರಿಯಾನಿಯಲ್ಲಿ ಚಿಕನ್ ಅಲ್ಲ, ಕಪ್ಪೆ ಪತ್ತೆ!