ಬೆಂಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ಸಂಕ್ರಾಂತಿ ಸಂಭ್ರಮವನ್ನು ತೆಲುಗು ದೇಶಂ ಪಕ್ಷದ (ಟಿಡಿಪಿ) ಬೆಂಗಳೂರು ವಿಭಾಗವು ನಗರದಲ್ಲಿ ಭರ್ಜರಿಯಾಗಿ ಆಚರಿಸಿತು. ಐಟಿಐ ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ಸಂಕ್ರಾಂತಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಿ ಸಂಭ್ರಮಿಸಲಾಯಿತು.
ಮೈದಾನದ ವೇದಿಕೆಯ ಆವರಣದಲ್ಲಿ ರಂಗೋಲಿ ಹಾಕಿ, ಅದರ ಮೇಲೆ ಮಡಿಕೆ ಇಟ್ಟು ಶೃಂಗರಿಸಲಾಗಿತ್ತು. ಕಬ್ಬಿನ ಜಲ್ಲೆಗಳನ್ನು ಇಟ್ಟು ಹಬ್ಬ ಆಚರಿಸಿ ಸಿಹಿ ತಿಂದು ಸಂಭ್ರಮಿಸಿದರು. ಈ ಸಂಭ್ರಮಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪತ್ನಿ ನಾರಾ ಭುವನೇಶ್ವರಿ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಟಿಡಿಪಿ ಸದಸ್ಯರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನಾರಾ ಭುವನೇಶ್ವರಿ, ''ನಾವು ಎಲ್ಲಿಂದ ಬಂದಿದ್ದೇವೆ ಎಂಬ ನಮ್ಮ ಮೂಲವನ್ನು ಎಂದಿಗೂ ಮರೆಯಬಾರದು. ಹೀಗಾಗಿ, ನಮ್ಮ ಮೂಲವನ್ನು ಪರಿಚಯಿಸುವ ಸಂಸ್ಕೃತಿ, ಆಚಾರ, ವಿಚಾರಗಳನ್ನು ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು'' ಎಂದು ತಿಳಿಸಿದರು.
ಐಟಿ - ಬಿಟಿ ಕ್ಷೇತ್ರಕ್ಕೆ ನಾಯ್ಡು ಅಡಿಪಾಯ: ''ಐಟಿ-ಬಿಟಿ ಕ್ಷೇತ್ರದಲ್ಲಿ ಇಂದು ಬೆಂಗಳೂರು ಬೆಳೆದಿದೆ. ದೇಶದ ಐಟಿ ವಲಯಕ್ಕೆ ಅಡಿಪಾಯ ಹಾಕಿದವರೇ ಚಂದ್ರಬಾಬು ನಾಯ್ಡು. 2000ರಲ್ಲಿ ವಿಷನ್ 2020 ಪರಿಕಲ್ಪನೆ ಮೂಲಕ ಐಟಿ ಬೆಳವಣಿಗೆಗೆ ಪೂರಕವಾಗಿ ಶ್ರಮಿಸಿದವರು. 2023ರಲ್ಲಿ ನನ್ನ ಪತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದಾಗ ಬೆಂಗಳೂರಿನ ಟಿಡಿಪಿಯು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ನೇನು ಸಹಿತ (ನಾನು ಕೂಡ) ಹೆಸರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವು ರಾಷ್ಟ್ರಮಟ್ಟದಲ್ಲೇ ಸುದ್ದಿಯಾಗಿತ್ತು. ಇದು ನನಗೆ ಹೊರಬಂದು ಹೋರಾಟ ಮಾಡಲು ಸ್ಫೂರ್ತಿಯಾಯಿತು'' ಎಂದು ನಾರಾ ಭುವನೇಶ್ವರಿ ಮೆಲುಕು ಹಾಕಿದರು.
''ಚಂದ್ರಬಾಬು ನಾಯ್ಡು ಅವರು ಎಂದಿಗೂ ಕುಟುಂಬ ರಾಜಕಾರಣ ಮಾಡಿಲ್ಲ. ನಿತ್ಯ ಸದಾ ಜನಪರ ಹೋರಾಟದಲ್ಲಿ ತನ್ನನ್ನು ತಾನು ಅರ್ಪಿಸಿಕೊಂಡವರು. ಕಾರ್ಯಕರ್ತರೇ ನಮಗೆ ನಿಜವಾದ ಶಕ್ತಿಯಾಗಿದ್ದಾರೆ. ಅಂದು ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಹೋರಾಡಿದ್ದರೆ, ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಗನ್ ಸರ್ಕಾರದ ದುರಾಡಳಿತ ಕೊನೆಗಾಣಿಸಲು ಸ್ವಾತಂತ್ರ್ಯದ ರೀತಿಯ ಹೋರಾಟ ಮಾಡಿ ಯಶಸ್ವಿಯಾದೆವು'' ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲ್ಯಾಣದುರ್ಗದ ಶಾಸಕ ಸುರೇಂದ್ರಬಾಬು, ಚಿತ್ತೂರು ಶಾಸಕ ಗುಡಿಬಾಲ ಜಗನ್ ಹಾಗೂ ಬೆಂಗಳೂರು ಟಿಡಿಪಿಯ ಪ್ರಮುಖರಾದ ಧೀರ ಮತ್ತು ಶ್ರೀಕಾಂತ್ ಒಳಗೊಂಡಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಸಿರಿಧಾನ್ಯ ಮೇಳ ಯಶಸ್ವಿ, 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ: ₹185 ಕೋಟಿ ವ್ಯಾಪಾರ ಒಪ್ಪಂದ