ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ನಿವೇಶನ ಹಂಚಿಕೆ ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ಮೈಸೂರು ಲೋಕಾಯುಕ್ತ ಅಧಿಕಾರಿಗಳು ಮಧ್ಯಂತರ ತನಿಖಾ ವರದಿಯನ್ನು ಧಾರವಾಡ ಹೈಕೋರ್ಟ್ ಪೀಠಕ್ಕೆ ಸೋಮವಾರ ಸಲ್ಲಿಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಪ್ರಭಾವದಿಂದ ಪತ್ನಿ ಪಾರ್ವತಿ ಮುಡಾದಲ್ಲಿ 14 ಬದಲಿ ನಿವೇಶನ ಪಡೆದುಕೊಂಡಿರುವ ಆರೋಪ ಸಂಬಂಧ ತನಿಖೆ ನಡಸುತ್ತಿರುವ ಮೈಸೂರು ಲೋಕಾಯುಕ್ತ ಎಸ್ಪಿ ಹಾಗೂ ತನಿಖಾಧಿಕಾರಿ ಟಿ.ಜೆ.ಉದೇಶ್ ಅವರು ಸೋಮವಾರ ಧಾರವಾಡ ಹೈಕೋರ್ಟ್ಗೆ ವರದಿ ಸಲ್ಲಿಸಲಿದ್ದಾರೆ.
ಇನ್ನೊಂದೆಡೆ, ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಸಂಬಂಧ ಸೋಮವಾರ ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಯಲಿದೆ. ಇದೇ ವೇಳೆ ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿಯನ್ನು ಲೋಕಾಯುಕ್ತ ಸಲ್ಲಿಸಲಿದೆ. ಡಿ.24ರೊಳಗೆ ವರದಿ ಸಲ್ಲಿಸುವಂತೆ ಕೋರ್ಟ್ ಸೂಚಿಸಿತ್ತು. ಸಲ್ಲಿಸಲಾಗುವ ವರದಿಯು ಮಧ್ಯಂತರ ವರದಿಯಾಗಿದ್ದು, ಪೂರ್ಣ ತನಿಖೆ ಬಳಿಕ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ಧಾರೆ.
ಮುಡಾ ಪ್ರಕರಣ ಸಂಬಂಧ ಸೋಮವಾರ ಧಾರವಾಡ ಹೈಕೋರ್ಟ್ ಪೀಠಕ್ಕೆ ವರದಿ ಸಲ್ಲಿಸಲಾಗುತ್ತದೆ. ಇದುವರೆಗೆ ತನಿಖೆ ಕಂಡು ಬಂದ ಅಂಶಗಳ ಬಗ್ಗೆ ವರದಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಯಾರ ಮೇಲೂ ದ್ವೇಷ ಸಾಧಿಸುತ್ತಿಲ್ಲ, ಅಷ್ಟು ದೊಡ್ಡ ಪ್ರಮಾಣದ ಟಿಡಿಆರ್ ಕೊಡಲು ಸಾಧ್ಯವಿಲ್ಲ: ಸಿಎಂ