ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾದ ನಟ ದರ್ಶನ್‌ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮೂರನೇ ಆರೋಪಿ ಪವನ್ ಅಲಿಯಾಸ್ ಪುಟ್ಟಸ್ವಾಮಿಯನ್ನು ಮೈಸೂರು ಜೈಲಿಗೆ ಸ್ಥಳಾಂತರಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಮೈಸೂರು ಜೈಲಿಗೆ ತನ್ನನ್ನು ಸ್ಥಳಾಂತರಿಸಲು 24ನೇ ಎಸಿಜೆಎಂ ನ್ಯಾಯಾಲಯವು ಆ.27ರಂದು ಹೊರಡಿಸಿದ ಆದೇಶ ರದ್ದು ಕೋರಿ ಪವನ್ ಹೈಕೊರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಪವನ್ ಪರ ವಕೀಲರು ಹಾಜರಾಗಿ, ಇದೇ ವಿಚಾರವಾಗಿ 14ನೇ ಆರೋಪಿ ಪ್ರದೋಷ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬೆಳಗಾವಿ ಜೈಲಿಗೆ ಸ್ಥಳಾಂತರಿಸಿದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಆ ಆದೇಶವು ಅರ್ಜಿದಾರನ ವಿಷಯದಲ್ಲೂ ಅನ್ವಯಿಸಲಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ರಾಜ್ಯ ಸರ್ಕಾರಿ ಅಭಿಯೋಜಕ ಬೆಳ್ಳಿಯಪ್ಪ ಅವರು, ಪ್ರದೋಷ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ತೀರ್ಪು ಪವನ್ ಸ್ಥಳಾಂತರದಲ್ಲೂ ಅನ್ವಯಿಸಲಿದೆ ಎಂದು ಒಪ್ಪಿಕೊಂಡರು.
ಸರ್ಕಾರಿ ಅಭೀಯೋಜಕರು ಉತ್ತರಿಸಿ, ಆರೋಪಿಗಳು ಒಂದೇ ಗುಂಪಿನವರಾಗಿರುವ ಕಾರಣ ಸಾಕ್ಷಿ ಮೇಲೆ ಪ್ರಭಾವ ಬೀರಬಹುದು ಎಂದು ಸ್ಥಳಾಂತರ ಮಾಡಲಾಗಿತ್ತಷ್ಟೆ ಎಂದು ಸಮಜಾಯಿಸಿ ನೀಡಿದರು.
ಇದಕ್ಕೆ ಪೀಠ, ಪ್ರತಿಕ್ರಿಯಿಸಿ, ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆಯಲ್ಲವೇ? ಮತ್ತೇನೂ ಪ್ರಭಾವ ಬೀರುವುದು? ಜೈಲುಗಳ ಸ್ಥಿತಿಗತಿಯನ್ನು ಸರ್ಕಾರ ಸುಧಾರಣೆ ಮಾಡಬೇಕಿದೆ. ನಿಜವಾಗಿಯೂ ಜೈಲುಗಳ ಸ್ಥಿತಿ ಭಯಾನಕವಾಗಿದೆ ಹಾಗೂ ಅವ್ಯವಸ್ಥೆಯಿಂದ ಕೂಡಿದೆ ಎಂದು ಆಘಾತ ವ್ಯಕ್ತಪಡಿಸಿತು.
ಪ್ರಕರಣದ ಹಿನ್ನೆಲೆ: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಕಾರಾಗೃಹ ಆವರಣದಲ್ಲಿ ದರ್ಶನ್ ಸಿಗರೇಟ್ ಹಿಡಿದು, ಮತ್ತೊಂದು ಕೈಯಲ್ಲಿ ಟಿ ಕಪ್ ಹಿಡಿದುಕೊಂಡು, ಆರಾಮಾಗಿ ಕುಳಿತು ಇತರ ಕೈದಿಗಳೊಂದಿಗೆ ಹರಟೆ ಹೊಡೆಯುತ್ತಿರುವ ಪೋಟೋ ಆ.25ರಂದು ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದರಿಂದ ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲಾಗಿತ್ತು. ಪವನ್ ಅನ್ನು ಮೈಸೂರಿಗೆ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: ಅ.22ರಂದು ಹೈಕೋರ್ಟ್‌ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ