ಹೈದರಾಬಾದ್: ಹೈದರಾಬಾದ್ ಬಿರಿಯಾನಿ ವರ್ಲ್ಡ್ ಫೇಮಸ್. ಈ ಖಾದ್ಯಕ್ಕೆ ಅದೆಷ್ಟೋ ಜನರು ಫ್ಯಾನ್ಸ್ ಇದ್ದಾರೆ. ಅಷ್ಟು ರುಚಿಕರವಾಗಿರುವ ಈ ಆಹಾರ ತಯಾರಿಸುವಲ್ಲಿ ಗಚ್ಚಿಬೌಲಿಯಲ್ಲಿರುವ ಐಐಐಟಿ ಮೆಸ್ ಯಡವಟ್ಟು ಮಾಡಿದೆ. ಬಿರಿಯಾನಿಯ ಚಿಕನ್ ತುಂಡುಗಳ ಜೊತೆಗೆ ಕಪ್ಪೆಯನ್ನೂ ಬೇಯಿಸಿ ನೀಡಿದೆ.
ಹೌದು, ಇಂಥದ್ದೊಂದು ಅಚಾತುರ್ಯ ಹೈದರಾಬಾದ್ನ ಐಐಐಟಿಯಲ್ಲಿ ಈಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಕ್ಟೋಬರ್ 17 ರಂದು ಕಾಲೇಜಿನಲ್ಲಿರುವ ಕದಂಬ ಮೆಸ್ನಲ್ಲಿ ತಯಾರಿಸಿದ ಚಿಕನ್ ಬಿರಿಯಾನಿಯಲ್ಲಿ ಕಪ್ಪೆ ಪತ್ತೆಯಾಗಿದೆ. ಇದನ್ನು ಕಂಡ ವಿದ್ಯಾರ್ಥಿ ಹೌಹಾರಿದ್ದಾನೆ.
ಕಪ್ಪೆಯನ್ನು ಮಸಾಲೆ ಪದಾರ್ಥದಲ್ಲಿ ಸಂಪೂರ್ಣವಾಗಿ ಬೇಯಿಸಲಾಗಿದೆ. ಊಟದ ತಟ್ಟೆಯಲ್ಲಿ ಮಂಡೂಕವನ್ನು ಕಂಡ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಕಾಪಾಡಬೇಕಾದ ಮೆಸ್ನ ಯಡವಟ್ಟಿನ ವಿರುದ್ಧ ಕಿಡಿಕಾರಿದ್ದಾರೆ.
ಈ ಘಟನೆಯನ್ನು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಗಳಲ್ಲಿ ವಿಡಿಯೋ ಸಮೇತ ಹಂಚಿಕೊಂಡಿದ್ದಾರೆ. ಇದು ವೈರಲ್ ಆಗಿದ್ದು, ವಿದ್ಯಾರ್ಥಿಗಳು ಮೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಪ್ಪೆಯು ಅಡುಗೆ ಮನೆಗೆ ಹೇಗೆ ಪ್ರವೇಶಿಸಿತು ಎಂಬುದು ಅಚ್ಚರಿ ಉಂಟು ಮಾಡಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಮಂಡೂಕವು ಬಿರಿಯಾನಿ ತಯಾರಿಸುವಾಗ ತಾನೇ ಬಂದು ಬಿದ್ದಿದೆ ಎಂದು ಹೇಳಲಾಗಿದೆ.
ಇನ್ನು, ಅಡುಗೆಯಲ್ಲಿ ಕಪ್ಪೆಯನ್ನು ಕಂಡ ವಿದ್ಯಾರ್ಥಿಗಳು ಮೆಸ್ ಉಸ್ತುವಾರಿಗೆ ದೂರು ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಯೋಗಕ್ಷೇಮದ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಮತ್ತೆ 24 ವಿಮಾನಗಳಿಗೆ ಬಾಂಬ್ ಬೆದರಿಕೆ: ಎರಡು ದಿನದಲ್ಲಿ 90 ಫ್ಲೈಟ್ಗಳಿಗೆ ಭೀತಿ