ನವದೆಹಲಿ: ವೀಸಾ ಸಂದರ್ಶನ ದಿನಾಂಕಗಳ ಮರುಹೊಂದಾಣಿಕೆ ನೀತಿಯಲ್ಲಿ ಯುಎಸ್ ಸರ್ಕಾರ ಮಹತ್ವದ ಬದಲಾವಣೆ ಮಾಡಿದ್ದು, ಹೊಸ ನಿಯಮಗಳು ಜನವರಿ 1, 2025 ರಿಂದ ಜಾರಿಗೆ ಬರಲಿವೆ. ಹೊಸ ನಿಯಮಗಳ ಅಡಿಯಲ್ಲಿ, ಅರ್ಜಿದಾರರು ತಮ್ಮ ಯುಎಸ್ ವೀಸಾ ಸಂದರ್ಶನ ದಿನಾಂಕ ಮತ್ತು ಸ್ಥಳವನ್ನು ಒಮ್ಮೆ ಮಾತ್ರ ಮರುಹೊಂದಿಸಲು ಅವಕಾಶವಿರುತ್ತದೆ. ಈ ಹಿಂದೆ, ವೀಸಾ ಅರ್ಜಿದಾರರು ತಮ್ಮ ಸಂದರ್ಶನದ ದಿನಾಂಕ ಅಥವಾ ಸ್ಥಳವನ್ನು ಮೂರು ಬಾರಿ ಬದಲಾಯಿಸುವ ಅವಕಾಶವನ್ನು ಹೊಂದಿದ್ದರು.
ಪ್ರಸ್ತುತ, ವಲಸೆಯೇತರ ವೀಸಾ ಸಂದರ್ಶನವನ್ನು ನಿಗದಿಪಡಿಸಿದ ನಂತರ ಅರ್ಜಿದಾರರು ದೆಹಲಿ, ಹೈದರಾಬಾದ್, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾ ಸೇರಿದಂತೆ ಹಲವಾರು ಯುಎಸ್ ಕಾನ್ಸುಲೇಟ್ ಸ್ಥಳಗಳ ಪೈಕಿ ಯಾವುದನ್ನಾದರೂ ಆಯ್ಕೆ ಮಾಡುವ ಅವಕಾಶವನ್ನು ಹೊಂದಿದ್ದಾರೆ. ಆದರೆ ಹೊಸ ಬದಲಾವಣೆಗಳ ಅನುಸಾರ ಅರ್ಜಿದಾರರು ಸಂದರ್ಶನದ ದಿನಾಂಕ ಅಥವಾ ಸ್ಥಳವನ್ನು ಕೇವಲ ಒಂದು ಬಾರಿ ಮಾತ್ರ ಬದಲಾವಣೆ ಮಾಡಬಹುದು. ಹೆಚ್ಚಿನ ಬದಲಾವಣೆಗಳ ಅಗತ್ಯವಿದ್ದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಸದ್ಯ ಸ್ಟ್ಯಾಂಡರ್ಡ್ ನಾನ್-ಇಮಿಗ್ರೆಂಟ್ ವೀಸಾ ಅರ್ಜಿ ಶುಲ್ಕ 185 ಯುಎಸ್ ಡಾಲರ್ ಆಗಿದೆ.
ಒಂದೊಮ್ಮೆ ಮರುಹೊಂದಿಸಿದ ಸಂದರ್ಶನಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೆ ಅಥವಾ ಸಂದರ್ಶನವನ್ನು ಮತ್ತೆ ಮರುಹೊಂದಿಸಬೇಕಾದ ಅಗತ್ಯವಿದ್ದರೆ ಅಂಥ ಅರ್ಜಿದಾರರು ಹೊಸದಾಗಿ ಸಂದರ್ಶನಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ ಹಾಗೂ ಮತ್ತೆ ಅರ್ಜಿ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ.