ಮಧ್ಯಪ್ರದೇಶ: ರೈಲಿನ ಟಾಪ್ ಮೇಲೆ (ಮೇಲ್ಛಾವಣಿ) ಏರಿದ್ದ ವ್ಯಕ್ತಿಯೊಬ್ಬ ಹೈವೋಲ್ಟೇಜ್ ಲೈನ್ ಮುಟ್ಟಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಬುರ್ಹಾನ್‌ಪುರನಲ್ಲಿ ನಡೆದಿದೆ. ಹೈವೋಲ್ಟೇಜ್ ಲೈನ್ ಮುಟ್ಟಿದ ತಕ್ಷಣ ಭಾರೀ ಸ್ಫೋಟಗೊಂಡಿದ್ದು, ಸ್ಫೋಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗುರುವಾರ ರಾತ್ರಿ ಬುರ್ಹಾನ್‌ಪುರದ ಲಾಲ್‌ಬಾಗ್ ನಿಲ್ದಾಣದಲ್ಲಿ ಈ ದಾರುಣ ಘಟನೆ ನಡೆದಿದೆ. ಸ್ಥಳೀಯರ ಮೊಬೈಲ್ನಲ್ಲಿ ಈ ವಿಡಿಯೋ ಸೆರೆಯಾಗಿದೆ. ನಿಂತಿದ್ದ ರೈಲಿನ ಮೇಲೆ ಯುವಕ ಇದ್ದಕ್ಕಿದ್ದಂತೆ ರೈಲಿನ ಮೇಲೆ ಹತ್ತಿದ್ದಲ್ಲದೇ ಹೈವೋಲ್ಟೇಜ್ ಕೇಬಲ್ ಹಿಡಿದಿದ್ದಾನೆ. ಆತ ಕೇಬಲ್ ಮುಟ್ಟಿದ ತಕ್ಷಣ ಭಾರಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಆತನ ದೇಹ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ನಿಲ್ದಾಣದಲ್ಲಿ ಇದ್ದಕ್ಕಿದ್ದಂತೆ ಉಂಟಾದ ಸ್ಫೋಟದ ಸದ್ದು ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದೆ.
ಯುವಕನ ಸ್ಥಿತಿ ಚಿಂತಾಜನಕ: ಪವನ್ ಎಕ್ಸ್‌ಪ್ರೆಸ್ ರೈಲು ಗುರುವಾರ ತಡರಾತ್ರಿ ಲಾಲ್‌ಬಾಗ್ ನಿಲ್ದಾಣದಲ್ಲಿ ನಿಂತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಯುವಕ ರೈಲಿನ ಟಾಪ್ ಮೇಲೆ ಹತ್ತಿದ್ದಾನೆ. ಇದನ್ನು ಗಮನಿಸಿದ ಪ್ರಯಾಣಿಕರು ಆತನಿಗೆ ಇಳಿಯುವಂತೆ ಹೇಳುತ್ತಿದ್ದರೂ ಆತ ಅತ್ತ-ಇತ್ತ ಕೈ ಬೀಸುತ್ತಲೇ ಇದ್ದ. ಈ ವೇಳೆ ಆತನ ಕೈ ಹೈವೋಲ್ಟೇಜ್ ಲೈನ್ಗೆ ತಾಗಿದ್ದು, ಹಠಾತ್ ನೆಲಕ್ಕೆ ಬಿದ್ದಿದ್ದಾನೆ. ಶಾಕ್ನಿಂದ ಸುಟ್ಟು ಕರಕಲಾಗಿರುವ ಆತನ ಸ್ಥಿತಿ ಸದ್ಯ ಚಿಂತಾಜನಕವಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ. ಯುವಕನನ್ನು ಆಂಬ್ಯುಲೆನ್ಸ್ ಮೂಲಕ ಜಿಆರ್‌ಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.
ಯುವಕನ ಗುರುತು ಪತ್ತೆಯಾಗಿಲ್ಲ: ಸದ್ಯ ಯುವಕನ ಗುರುತು ಪತ್ತೆಯಾಗಿಲ್ಲ ಎಂದು ಜಿಆರ್‌ಪಿ ಎಎಸ್‌ಐ ಅಬ್ದುಲ್ ಶರೀಫ್ ತಿಳಿಸಿದ್ದಾರೆ. ರೈಲು ನಿಂತ ತಕ್ಷಣ ಇದೆಲ್ಲ ಇದ್ದಕ್ಕಿದ್ದಂತೆ ಸಂಭವಿಸಿತು. ಎಲ್ಲಿ, ಏನಾಯ್ತು ಎಂದು ಅರ್ಥವೇ ಆಗಲಿಲ್ಲ. ಒಂದು ಕ್ಷಣ ಪ್ರಯಾಣಿಕರೆಲ್ಲರೂ ಭಯಬೀತರಾಗಿದ್ದರು. ಸದ್ಯ ಯುವಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಜಿಆರ್‌ಪಿ ಮತ್ತು ಆರ್ಪಿಎಫ್ ಪೊಲೀಸರು ಯುವಕರನ್ನು ಗುರುತಿಸುವಲ್ಲಿ ನಿರತರಾಗಿದ್ದಾರೆ ಎಂದು ಅಬ್ದುಲ್ ಶರೀಫ್ ತಿಳಿಸಿದ್ದಾರೆ.