ನವದೆಹಲಿ:ದೇಶದಲ್ಲಿ ಜಾರಿಯಾಗಿರುವ ಪೌರತ್ವ ನೀಡುವ ಸಿಎಎ ಕಾಯ್ದೆಗೆ ಕೆಲವೆಡೆ ಆಕ್ಷೇಪ ವ್ಯಕ್ತವಾಗುತ್ತಿದ್ದರೆ, ವಿದೇಶದಿಂದ ಶ್ಲಾಘನೆ ಹರಿದು ಬರುತ್ತಿದೆ. ಅಮೆರಿಕದ ಖ್ಯಾತ ನಟಿ, ಗಾಯಕಿ ಮೇರಿ ಮಿಲ್ಬೆನ್ ಸಿಎಎ ಕಾಯ್ದೆ ಜಾರಿಯು "ಪ್ರಜಾಪ್ರಭುತ್ವದ ನಿಜವಾದ ಕೆಲಸ ಮತ್ತು ಶಾಂತಿಯ ಮಾರ್ಗ" ಎಂದು ಬಣ್ಣಿಸಿದ್ದಾರೆ.
ಅಮೆರಿಕನ್ ನಟಿ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದು, ಸಹಾನುಭೂತಿ ಹೊಂದಿರುವ ನಿಜವಾದ ನಾಯಕ. ಭಾರತಕ್ಕೆ ಸಿಕ್ಕ ಅತ್ಯುತ್ತಮ ಧುರೀಣ. ಅಲ್ಪಸಂಖ್ಯಾತರು ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ "ಜಾಗತಿಕ ವಕೀಲ" ಎಂದು ಬಣ್ಣಿಸಿದ್ದಾರೆ.
ಬೇರೆ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾಗಿರುವ ಜನರಿಗೆ ಪೌರತ್ವ ನೀಡುವ ಕಾಯ್ದೆ ಜಾರಿ ಮಾಡಿದ್ದು, ಸಹಾನುಭೂತಿಯ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದಗಳು ಎಂದು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಮೋದಿ ಕಾಲಿಗೆ ಎರಗಿದ್ದ ಗಾಯಕಿ:2022 ರಲ್ಲಿ ಭಾರತದ 75 ನೇ ಸ್ವಾತಂತ್ರ್ಯದ ವಾರ್ಷಿಕೋತ್ಸವದ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಅಮೆರಿಕದ ಮೇರಿ ಮಿಲ್ಬೆನ್ ಅವರು ಆಹ್ವಾನಿತ ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಅವರು ಕಾರ್ಯಕ್ರಮದಲ್ಲಿ ಗಾಯನ ಪ್ರದರ್ಶನ ನೀಡಿದ್ದರು.