ಗುರುಗ್ರಾಮ, ಹರಿಯಾಣ: ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಭಾನುವಾರ ತಮ್ಮ 100ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಾರ್ಟರ್ ನಿಧನದಿಂದ ಅಮೆರಿಕ ಶೋಕ ಸಾಗರದಲ್ಲಿ ಮುಳುಗಿದೆ. ಇನ್ನು ಭಾರತದ ಗುರುಗ್ರಾಮದ ಹಳ್ಳಿಯೊಂದರಲ್ಲಿ ಅವರ ನೆನಪು ಉಮ್ಮಳಿಸಿ ಬರುವಂತೆ ಮಾಡಿದೆ. ಜಿಮ್ಮಿ ಕಾರ್ಟರ್ಗೂ ಹರಿಯಾಣದ ಈ ಹಳ್ಳಿಗೂ ವಿಶೇಷ ಸಂಬಂಧವಿತ್ತು ಎನ್ನುವುದು ಈಗ ಗಮನ ಸೆಳೆದಿದೆ. ಇದೇ ಕಾರಣಕ್ಕೆ ಈ ಗ್ರಾಮದಲ್ಲಿ ಶೋಕದ ವಾತಾವರಣ ಕಂಡು ಬರುತ್ತಿದೆ.
ಜಿಮ್ಮಿ ಕಾರ್ಟರ್ ಹೆಸರಿನಲ್ಲೊಂದು ಊರು: ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಈಗ ನಮ್ಮ ನಡುವೆ ಇಲ್ಲ. ವಿಶೇಷವಾಗಿ ಹರಿಯಾಣದ ಗುರುಗ್ರಾಮದ ಕಾರ್ಟರ್‌ಪುರಿ ಗ್ರಾಮ, ಅಮೆರಿಕದ ಮಾಜಿ ಅಧ್ಯಕ್ಷರ ನಿಧನದಿಂದ ಶೋಕಸಾಗರದಲ್ಲಿ ಮುಳುಗುವಂತಾಗಿದೆ. ವಾಸ್ತವವಾಗಿ ಈ ಗ್ರಾಮಕ್ಕೆ ಕಾರ್ಟರ್‌ಪುರಿ ಎಂಬ ಹೆಸರಿದೆ. 1978ಕ್ಕೂ ಮೊದಲು ಈ ಗ್ರಾಮವನ್ನು ದೌಲತ್‌ಪುರ್ ನಾಸಿರಾಬಾದ್ ಎಂದು ಕರೆಯಲಾಗುತ್ತಿತ್ತು. ಅಮೆರಿಕದ ಅಧ್ಯಕ್ಷರಾಗಿದ್ದ ಜಿಮ್ಮಿ ಕಾರ್ಟರ್, ತಮ್ಮ ತಾಯಿಯ ಆಸೆಯಂತೆ ಜನವರಿ 3, 1978 ರಂದು ತಮ್ಮ ಪತ್ನಿ ರೊಸಾಲಿನ್ ಕಾರ್ಟರ್ ಅವರೊಂದಿಗೆ ಈ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಸವಿ ನೆನಪಿಗಾಗಿ ಗುರುಗ್ರಾಮದ ಸೆಕ್ಟರ್ 23ರ ಸಮೀಪದಲ್ಲಿರುವ ದೌಲತ್‌ಪುರ ನಾಸಿರಾಬಾದ್ ಎಂಬ ಗ್ರಾಮದ ಹೆಸರನ್ನು ಕಾರ್ಟರ್‌ಪುರಿ ಎಂದು ಬದಲಾಯಿಸಲಾಗಿತ್ತು.
ಈ ಗ್ರಾಮದಲ್ಲಿ ಕೆಲಸ ಮಾಡಿದ್ದ ಜಿಮ್ಮಿ ಕಾರ್ಟರ್ ತಾಯಿ: ಜಿಮ್ಮಿ ಕಾರ್ಟರ್ ಅವರ ತಾಯಿ ಬೆಸ್ಸಿ ಲಿಲಿಯನ್ ಕಾರ್ಟರ್ 1960ರ ದಶಕದಲ್ಲಿ ಶಾಂತಿ ಕಾರ್ಪ್ಸ್‌ನಲ್ಲಿ ಆರೋಗ್ಯ ಸ್ವಯಂಸೇವಕರಾಗಿ ಅಂದಿನ ದೌಲತ್‌ಪುರ ನಾಸಿರಾಬಾದ್ ಗ್ರಾಮದಲ್ಲಿ ಕೆಲಸ ಮಾಡಿದ್ದರು. ವೃತ್ತಿಯಲ್ಲಿ ನರ್ಸ್ ಆಗಿದ್ದ ಬೆಸ್ಸಿ ಲಲಿಯನ್ ಕಾರ್ಟರ್, ಈ ಗ್ರಾಮದಲ್ಲಿ ತಮ್ಮ ಸೇವೆ ಸಲ್ಲಿಸಿ ಗಮನ ಸೆಳೆದಿದ್ದರು. ಹೀಗಾಗಿ ಜಿಮ್ಮಿ ಕಾರ್ಟರ್ ಭಾರತ ಪ್ರವಾಸಕ್ಕೆ ಹೊರಟಿದ್ದಾರೆಂದು ತಿಳಿದಾಗ, ಅವರ ಜೊತೆಗೆ ದೌಲತ್‌ಪುರ ನಾಸಿರಾಬಾದ್ ಗ್ರಾಮವನ್ನು ನೋಡುವ ಬಯಕೆ ವ್ಯಕ್ತಪಡಿಸಿದ್ದರು. ತಾಯಿಯ ಆಸೆಯಂತೆ ಜಿಮ್ಮಿ ಕಾರ್ಟರ್ ಈ ಗ್ರಾಮಕ್ಕೆ ಭೇಟಿ ನೀಡಿದ್ದರು.