ಕೊಯಮತ್ತೂರು (ತಮಿಳುನಾಡು): ಕೆಲ ದಿನಗಳ ಹಿಂದೆ ಚೆನ್ನೈನ ತಿರುಮುಲ್ಲೈವಾಯಲ್‌ನ ಅಪಾರ್ಟ್‌ಮೆಂಟ್‌ನಲ್ಲಿ ಕೆಳಗೆ ಬೀಳುತ್ತಿದ್ದ ಮಗುವನ್ನು ಜೀವಂತವಾಗಿ ರಕ್ಷಿಸಲಾಗಿತ್ತು. ಈಗ ಆ ಮಗುವಿನ ತಾಯಿ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಯಮತ್ತೂರು ಜಿಲ್ಲೆ ಕರಮಡೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೊಯಮತ್ತೂರಿನ ಕರಮಡೈ ಬೆಳ್ಳತ್ತಿಯ ವಾಸುದೇವನ್ ಅವರ ಎರಡನೇ ಮಗಳು ರಮ್ಯಾ ಅವರು ತಮ್ಮ ಪತಿ ವೆಂಕಟೇಶ್ ಮತ್ತು ಇಬ್ಬರು ಮಕ್ಕಳೊಂದಿಗೆ ಚೆನ್ನೈನ ತಿರುಮುಲ್ಲೈವಾಯಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಏಪ್ರಿಲ್ 28 ರಂದು, ಅವರ 7 ತಿಂಗಳ ಮಗು ಫ್ಲಾಟ್‌ನ ಬಾಲ್ಕನಿಯಿಂದ ಕೆಳಗೆ ಬೀಳುತ್ತಿತ್ತು. ಸ್ಥಳದ ನಿವಾಸಿಗಳು ಮಗುವನ್ನು ಸುರಕ್ಷಿತವಾಗಿ ರಕ್ಷಿಸಲು ಹಲವಾರು ಪ್ರಯತ್ನಗಳನ್ನು ಮಾಡಿದರು. ಬಳಿಕ ಮಾಳಿಗೆಯಿಂದ ಬೀಳುತ್ತಿದ್ದ ಮಗುವನ್ನು ಸ್ಥಳೀಯರು ತಮ್ಮ ಪ್ರಾಣವನ್ನು ಲೆಕ್ಕಿಸದೇ ರಕ್ಷಿಸಿದರು. ಇದರ ಸನ್ನಿವೇಶಗಳ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಂಚಲನ ಮೂಡಿಸಿತ್ತು.
ಈ ಘಟನೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮಗುವನ್ನು ಸರಿಯಾಗಿ ನೋಡಿಕೊಳ್ಳದಿರುವುದೇ ಇದಕ್ಕೆ ಕಾರಣ ಎಂಬಂತೆ ತಾಯಿ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ಇಂತಂಹ ಟ್ರೋಲ್ಗಳಿಂದಾಗಿ ಮಗುವಿನ ತಾಯಿ ರಮ್ಯಾ ತೀವ್ರ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಕೆಲ ವಾರಗಳ ಹಿಂದೆ ರಮ್ಯಾ ಪತಿ ಹಾಗೂ ಮಗುವಿನೊಂದಿಗೆ ಕೊಯಮತ್ತೂರಿನ ತವರು ಕಾರಾಮಡೈಗೆ ಬಂದಿದ್ದರು. ನಿನ್ನೆ ರಮ್ಯಾ ಅವರ ತಾಯಿ, ತಂದೆ ಮತ್ತು ಕುಟುಂಬದವರು ಕಾರ್ಯಕ್ರಮಕ್ಕೆಂದು ಹೊರಗೆ ಹೋದಾಗ ಮನೆಯಲ್ಲಿ ಒಬ್ಬಳೇ ಇದ್ದ ರಮ್ಯಾ ಹಠಾತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.