ಲಖನೌ ಉತ್ತರಪ್ರದೇಶ: ಎಂಟು ತಿಂಗಳಲ್ಲಿ 5 ಬಾರಿ ವರ್ಗಾವಣೆಯಾಗಿರುವುದರಿಂದ ಬೇಸತ್ತು ಉತ್ತರ ಪ್ರದೇಶದ ಪೊಲೀಸ್ ಪೇದೆಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕಾನ್ಸ್‌ಟೇಬಲ್ ಲಖನೌದಲ್ಲಿ ನಿಯೋಜನೆಗೊಂಡಿದ್ದರು. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ಅವರು ಪತ್ರವನ್ನೂ ಬರೆದಿದ್ದಾರೆ. ಇದಾದ ಬಳಿಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿದೆ. ಆದರೆ, ಯಾವೊಬ್ಬ ಪೊಲೀಸ್ ಅಧಿಕಾರಿಯೂ ಈ ವಿಚಾರದಲ್ಲಿ ಏನನ್ನೂ ಹೇಳಲು ಸಿದ್ಧರಿಲ್ಲ.
ಪ್ರಸ್ತುತ ಲಖನೌದ ನಾಗ್ರಾಮ್ ಪೊಲೀಸ್ ಠಾಣೆಯಲ್ಲಿ ಯುಪಿ 112 ರಲ್ಲಿ ನಿಯೋಜಿತರಾಗಿರುವ ಕಾನ್ಸ್‌ಟೇಬಲ್ ನಿಯಾಜ್ ಅಹ್ಮದ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಅವರು ಲಖನೌ ಪೊಲೀಸ್ ಕಮಿಷನರ್‌ಗೆ ಕಳುಹಿಸಿದ್ದಾರೆ. ಇದರಲ್ಲಿ ಕಳೆದ 8 ತಿಂಗಳಲ್ಲಿ 5 ಬಾರಿ ವರ್ಗಾವಣೆಯಾಗಿರುವುದರಿಂದ ಬೇಸತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ವರ್ಗಾವಣೆಯಿಂದ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ಪತ್ರದಲ್ಲಿ ಅವರು ವಿವರಿಸಿದ್ದಾರೆ. ಈ ಸ್ಥಿತಿಯಿಂದಾಗಿ ಕೆಲವು ಅಹಿತಕರ ಘಟನೆಗಳು ಸಂಭವಿಸಬಹುದು. ವರ್ಗಾವಣೆಯಿಂದಾಗಿ ತಮ್ಮ ಮಾನಸಿಕ ಸ್ಥಿತಿ ಮತ್ತು ಕುಟುಂಬದ ಪರಿಸ್ಥಿತಿಯನ್ನು ಪರಿಗಣಿಸಿ ನಾನು ಕೆಲಸಕ್ಕೆ ರಾಜೀನಾಮೆ ನೀಡಲು ಬಯಸುತ್ತೇನೆ ಎಂದು ಪತ್ರದಲ್ಲಿ ಪೇದೆ ನಿಯಾಜ್ ಅಹ್ಮದ್ ವಿವರಿಸಿದ್ದಾರೆ.
ತನಿಖೆಗೆ ಆದೇಶ ನೀಡಿದ ಕಮಿಷನರ್: ಪೊಲೀಸ್ ಕಾನ್ಸ್‌ಟೇಬಲ್ ಬರೆದಿರುವ ಪತ್ರದ ಗಂಭೀರತೆಯನ್ನು ಅರಿತಿರುವ ಪೊಲೀಸ್ ಆಯುಕ್ತ ಅಮರೇಂದ್ರ ಸೆಂಗಾರ್, ಈ ವಿಷಯದ ತನಿಖೆಯನ್ನು ಡಿಸಿಪಿ ಸೆಂಟ್ರಲ್ ರವೀನಾ ತ್ಯಾಗಿ ಅವರಿಗೆ ವಹಿಸಿದ್ದಾರೆ. ಕಾನ್ಸ್‌ಟೇಬಲ್ ಅವರೊಂದಿಗೆ ಮಾತನಾಡಲು ಸೂಚಿಸಿದ್ದಾರೆ. ಕಾನ್ಸ್‌ಟೇಬಲ್ ಹೇಳಿಕೆ ಪ್ರಕಾರ ಉದ್ದೇಶಪೂರ್ವಕವಾಗಿ ಅವರನ್ನು ವರ್ಗಾವಣೆ ಮಾಡಲಾಗುತ್ತಿದೆ. ಇದರಿಂದ ಅವರು ತುಂಬಾ ಅಸಮಾಧಾನಗೊಂಡಿದ್ದಾರೆ ಮತ್ತು ಅವರು ಇನ್ಮುಂದೆ ಕೆಲಸ ಮಾಡಲು ಬಯಸುವುದಿಲ್ಲ ಎಂಬ ತೀರ್ಮಾನ ಮಾಡಿದ್ದಾರೆ.
ಪೊಲೀಸರು ಮಾನಸಿಕ ಒತ್ತಡದಲ್ಲಿರುವುದೇಕೆ?: ಒಂದು ಅಧ್ಯಯನದ ಪ್ರಕಾರ ದೇಶದಲ್ಲಿ ಸುಮಾರು 24 ಪ್ರತಿಶತ ಪೊಲೀಸರು ಸರಾಸರಿ 16 ಗಂಟೆಗಳ ಕಾಲ ಮತ್ತು ಶೇ 44 ರಷ್ಟು ಜನ 12 ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಾರೆ. ಅಧ್ಯಯನದ ಪ್ರಕಾರ, ಪೊಲೀಸರು ಸರಾಸರಿ ಪ್ರತಿದಿನ 14 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ಶೇಕಡಾ 73 ರಷ್ಟು ಪೊಲೀಸರು ತಮ್ಮ ಕೆಲಸದ ಹೊರೆಯಿಂದ ಬಳಲುತ್ತಿದ್ದು, ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ. 85 ರಷ್ಟು ಪೊಲೀಸರ ಪ್ರಕಾರ, ಅವರು ತಮ್ಮ ಕರ್ತವ್ಯದ ಕಾರಣದಿಂದಾಗಿ ತಮ್ಮ ಕುಟುಂಬಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಧ್ಯಯನದ ವೇಳೆ ಹೇಳಿಕೊಂಡಿದ್ದಾರೆ.