ಹೈದರಾಬಾದ್ (ತೆಲಂಗಾಣ) : ಆಪತ್ತಿನಲ್ಲಿರುವವರಿಗೆ ತಕ್ಷಣಕ್ಕೆ ಸಹಾಯಕ್ಕೆ ಬರಲು ಇರುವ ಡಯಲ್ 100 ಸಹಾಯವಾಣಿಗೆ ನಕಲಿ ಕರೆಗಳು ಹೆಚ್ಚುತ್ತಿವೆ. ಕಿಡಿಗೇಡಿಗಳು ಅನಗತ್ಯ ಕರೆ ಮಾಡುವ ಮೂಲಕ ಪೊಲೀಸರ ಸಮಯ ಮತ್ತು ಶ್ರಮ ವ್ಯರ್ಥ ಮಾಡುತ್ತಿದ್ದಾರೆ. ಕೆಲವೊಮ್ಮೆ ಸಹಾಯವಾಣಿಗೆ ಬರುವ ಕರೆಗಳು ನಿಜವೋ ಅಥವಾ ಸುಳ್ಳೋ ಎಂದು ಪೊಲೀಸರೇ ಅನುಮಾನಿಸುವಂತಾಗಿದೆ.
ಕೆಲವೊಮ್ಮೆ ಬಂದ ಕರೆಗಳ ಜಾಡು ಹಿಡಿದು ಆ ಪ್ರದೇಶಕ್ಕೆ ಪೊಲೀಸರು ತೆರಳಿದರೆ, ಅಲ್ಲಿ ದೂರಿದಂತೆ ಯಾವುದೇ ಘಟನೆಗಳು ನಡೆದಿರುವುದಿಲ್ಲ. ಇಂಥದ್ದೇ ಸುಳ್ಳು ಕರೆ ಮಾಡಿದ ಪ್ರಕರಣ ನಿಜಾಮಾಬಾದ್ನಲ್ಲಿ ಸೋಮವಾರ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಆತನಿಗೆ ತಕ್ಕ ಶಿಕ್ಷೆ ನೀಡಿದ್ದಾರೆ.
ಕುಡಿದ ಮತ್ತಿನಲ್ಲಿ ಹುಚ್ಚಾಟ: ನಿಜಾಮಾಬಾದ್ ಜಿಲ್ಲೆಯ ವೇಲ್ಪುರ್ ಮಂಡಲದ ಪಚಲ ನಡುಕುಡ ಗ್ರಾಮದ ಪುಲಿ ಸಚಿನ್ (37) ಎಂಬಾತ ಮದ್ಯದ ಮತ್ತಿನಲ್ಲಿ ಸೋಮವಾರ ರಾತ್ರಿ 10:30 ರಿಂದ ನಡುರಾತ್ರಿ 1 ಗಂಟೆಯವರೆಗೆ ಡಯಲ್ 100 ಗೆ 7 ಬಾರಿ ಕರೆ ಮಾಡಿದ್ದಾನೆ. ಪ್ರತಿ ಬಾರಿ ಕರೆ ಮಾಡಿದಾಗಲೂ ಆರೋಪಿ ತನ್ನ ವಿವರಗಳನ್ನು ನೀಡದೆ ಪೊಲೀಸರಿಗೆ ತಲೆನೋವು ತಂದಿದ್ದಾನೆ.
ರಾತ್ರಿ ವೇಳೆ ನಿರಂತರವಾಗಿ ಕರೆ ಮಾಡಿದ ವ್ಯಕ್ತಿಯ ಬಗ್ಗೆ ಸಹಾಯವಾಣಿ ಸಿಬ್ಬಂದಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕರೆ ಬಂದ ಫೋನ್ ಸಂಖ್ಯೆ ಆಧಾರದ ಮೇಲೆ ಸ್ಥಳ ಪತ್ತೆ ಮಾಡಿದ ಪೊಲೀಸರು ಮಂಗಳವಾರ ಬೆಳಗ್ಗೆ ಆರೋಪಿಯನ್ನು ಬಂಧಿಸಿದ್ದಾರೆ. ನಂತರ, ಇಲ್ಲಿನ ಎರಡನೇ ಹಂತದ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ವಿಚಾರಣೆಯ ವೇಳೆ ಆತ, ಕುಡಿದ ಮತ್ತಿನಲ್ಲಿ ಹೀಗೆ ಮಾಡಿದ್ದಾಗಿ ತಿಳಿಸಿದ್ದಾನೆ. ತುರ್ತು ಅಗತ್ಯಗಳಿಗೆ ಸ್ಪಂದಿಸಲು ಇರುವ ಸಹಾಯವಾಣಿಗೆ ಬೇಕಾಬಿಟ್ಟಿ ಕರೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆಧಾರದ ಮೇಲೆ ಆರೋಪಿಗೆ ನ್ಯಾಯಾಧೀಶ ಜಿ.ಗಂಗಾರೆಡ್ಡಿ ಅವರು 4 ದಿನಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.
ತುರ್ತು ಸಂದರ್ಭಗಳಲ್ಲಿ ಜನರಿಗೆ ಉಪಯುಕ್ತವಾಗಿರುವ ಡಯಲ್ 100 ಅನ್ನು ಅಗತ್ಯ ಉದ್ದೇಶಗಳಿಗೆ ಮಾತ್ರ ಬಳಸಬೇಕು. ಯಾರಾದರೂ ದುರುಪಯೋಗಪಡಿಸಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೋರ್ಟ್ ಇದೇ ವೇಳೆ ಎಚ್ಚರಿಕೆ ನೀಡಿದೆ.
ಹುಚ್ಚಾಟದ ಪರಮಾವಧಿ: ತುರ್ತು ಪೊಲೀಸ್ ಸಹಾಯವಾಣಿಯಾದ ಡಯಲ್ 100 ಗೆ ನಕಲಿ ಕರೆಗಳು ಬರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಹಿಂದೆ ಸಹಾಯವಾಣಿಗೆ, ಪೊಲೀಸರು ತಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸುತ್ತಿದ್ದಾರೆಯೇ ಎಂದು ತಿಳಿಯಲು, ತಮ್ಮ ಗೆಳತಿ ಮೇಲೆ ಕೋಪಗೊಂಡು ಒಬ್ಬರು, ತಮ್ಮ ಹೆಂಡತಿಯ ಬಗ್ಗೆ ದೂರಲು ಇನ್ನೊಬ್ಬರು, ಕುಡಿದ ಮತ್ತಿನಲ್ಲಿ ಹುಚ್ಚಾಟಕ್ಕೆ ನಕಲಿ ಕರೆ ಮಾಡಿದ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.