ಮಂಗಳೂರು: ಏರ್ ಇಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ಅಡಚಣೆಯಿಂದ ಪ್ರಯಾಣಿಕರು ಸೋಮವಾರ ರಾತ್ರಿಯಿಡೀ ಪರದಾಟ ನಡೆಸಿದ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಸೋಮವಾರ ಸಂಜೆ 7 ಗಂಟೆಗೆ ದಮಾಮ್‌ಗೆ ಹಾರಬೇಕಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ಸಮಸ್ಯೆಯಿಂದ ಈ ತೊಂದರೆ ಆಗಿದೆ. ಮಂಗಳೂರು - ದಮಾಮ್ ನಡುವೆ ಸಂಚರಿಸುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಸೋಮವಾರ ರಾತ್ರಿ ಟೇಕಾಫ್‌ಗೆ ಸಿದ್ದವಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ ಟೇಕಾಫ್ ಆಗದೇ ವಿಮಾನದಲ್ಲಿ ಏಕಾಏಕಿ ಲೈಟ್ ಆಫ್ ಆಗಿದೆ. ಪರಿಣಾಮ ಪ್ರಯಾಣಿಕರು ಕತ್ತಲೆಯಲ್ಲಿ ಕುಳಿತುಕೊಳ್ಳುವಂತಾಯ್ತು. ಬಳಿಕ ಟೇಕಾಫ್ ರದ್ದುಗೊಳಿಸಿದ್ದರಿಂದ ವಿಮಾನವೇರಿ ಕುಳಿತಿದ್ದ ಪ್ರಯಾಣಿಕರನ್ನು ವಿಮಾನ ಸಿಬ್ಬಂದಿಯು ಮತ್ತೆ ಏರ್ಪೋರ್ಟ್ ಲಾಂಜ್‌ಗೆ ಕಳುಹಿಸಿದರು. ಆದ್ದರಿಂದ ರಾತ್ರಿಯಿಡೀ ಪ್ರಯಾಣಿಕರು ಲಾಂಜ್‌ನಲ್ಲಿಯೇ ಪರದಾಡುವಂತಾಯ್ತು. ಮಂಗಳವಾರ ಬೆಳಗ್ಗೆ 7.20ಕ್ಕೆ ವಿಮಾನ ದಮಾಮ್‌ನತ್ತ ಹಾರಾಟ ನಡೆಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು, ಜನವರಿ 27 ರಂದು ಸಂಜೆ 7 ಗಂಟೆಗೆ ದಮಾಮ್ಗೆೆ ಹೊರಡಬೇಕಿದ್ದ IX 885 ವಿಮಾನವು ಇಂದು ಬೆಳಗ್ಗೆ 7.20 ಕ್ಕೆ ಹೊರಟಿತು. ಆ ಪ್ರಯಾಣಕ್ಕೆ ನಿಗದಿಪಡಿಸಲಾದ ಮೂಲ ವಿಮಾನವನ್ನು AOG ಎಂದು ಘೋಷಿಸಿ ಮತ್ತೆ ನಿಂತ ಸ್ಥಿತಿಗೆ ತರಲಾಯಿತು. ರಾತ್ರಿಯ ದಮಾಮ್ ಪ್ರಯಾಣಿಕರನ್ನು ಕರೆದೊಯ್ಯಲು ಇಂದು ಬೆಳಗ್ಗೆ ಬಂದ ವಿಮಾನವನ್ನು ಬಳಸಿತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ದಾಖಲೆ: ಒಂದೇ ದಿನ 7,710 ಪ್ರಯಾಣಿಕರ ನಿರ್ವಹಣೆ - MANGALURU INTERNATIONAL AIRPORT